ಸಂಚಾರಿ ಅಗ್ನಿಶಾಮಕ ಅನುಷ್ಠಾನಕ್ಕೆ ಶಿಫಾರಸು
ಉಪ್ಪಿನಂಗಡಿ: ರಾ.ಹೆ. 75ರಲ್ಲಿ ಸಾಗಿಸಲಾಗುತ್ತಿರುವ ಅಡುಗೆ ಅನಿಲ ಸಹಿತ ಅಪಾಯಕಾರಿ ವಸ್ತುಗಳ ಸಾಗಾಟದ ವೇಳೆ ಉಂಟಾಗಬಹುದಾದ ಅವಘಡಗಳನ್ನು ನಿರ್ವಹಿಸಲು ರಾಷ್ಟ್ರೀಯ ಹೆದ್ದಾರಿ ಸಂಚಾರ ನಿಗಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಅಪಘಾತ ಸಂದರ್ಭಗಳಲ್ಲಿ ತ್ವರಿತ ಸ್ಪಂದನ ದೊರೆಯುವಂತಾಗಲು ಸಂಚಾರಿ ಅಗ್ನಿಶಾಮಕ ದಳದ ವ್ಯವಸ್ಥೆಯನ್ನು ಅನುಷ್ಠಾನಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಐಜಿಪಿ ಪ್ರತಾಪ್ ರಡ್ಡಿ ತಿಳಿಸಿದರು.
ಅವರು ಟ್ಯಾಂಕರ್ ಅಪಘಾತಗೊಂಡು ಅನಿಲ ಸೋರಿಕೆಯಾಗಿ ಅಗ್ನಿದುರಂತ ಸಂಭವಿಸಿದ ರಾ.ಹೆ. 75ರ ಪೆರ್ನೆ ಎಂಬಲ್ಲಿಗೆ ಬುಧವಾರದಂದು ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಲೋಪಗಳ ಬಗ್ಗೆ ತನಿಖೆ: ಘಟನೆ ಸಂಭವಿಸಿದಾಕ್ಷಣ ಹೆದ್ದಾರಿಯಲ್ಲಿನ ವಾಹನ ಸಂಚಾರವನ್ನು ಪೊಲೀಸರು ನಿಯಂತ್ರಿಸಿದ ಕಾರಣ ಸಂಭವನೀಯ ಇನ್ನೂ ಹೆಚ್ಚಿನ ಅನಾಹುತ ತಪ್ಪಿದಾಂತಾಗಿದೆ. ಅಡುಗೆ ಅನಿಲದಂತಹ ಅಪಾಯಕಾರಿ ವಸ್ತುಗಳ ಸಾಗಾಟ ಸಂದರ್ಭದಲ್ಲಿ ಪಾಲಿಸಬೇಕಾದ ಕೆಲವು ಕಟ್ಟುನಿಟ್ಟು ಕ್ರಮಗಳ ಬಗ್ಗೆ ತೈಲ ಕಂಪೆನಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರಲ್ಲಿನ ಪಾಲನೆಯಲ್ಲಿ ಆಗಿರಬಹುದಾದ ಲೋಪಗಳ ಬಗ್ಗೆ ತನಿಖೆ ನಡೆಸಲಾಗುವುದು.
ಮಂಗಳವಾರ ಸಂಭವಿಸಿದ ದುರ್ಘಟನೆ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿರುವ ಸಾಧ್ಯತೆಯೇ ಕಂಡು ಬಂದಿದ್ದು, ಇಂತಹ ಟ್ಯಾಂಕರ್‌ಗಳನ್ನು ಚಲಾಯಿಸುವ ಚಾಲಕರು ಸಂಭವನೀಯ ದುರಂತಗಳ ಅರಿವು ಮತ್ತು ಮುನ್ನೆಚ್ಚರಿಕಾ ಪರಿಜ್ಞಾನವನ್ನು ಹೊಂದಿರಬೇಕಾಗುತ್ತದೆ. ಕಳೆದ ಮಾರ್ಚ್ 18ರಂದು ನಾವು ತೈಲ ಕಂಪನಿಗಳ ಜೊತೆ ಈ ವಿಚಾರದ ಬಗ್ಗೆ ವಿಸ್ಕೃತವಾಗಿ ಚರ್ಚಿಸಿದ್ದು, ಹೆದ್ದಾರಿಯನ್ನು ಅಪಘಾತರಹಿತಗೊಳಿಸುವಲ್ಲಿ ಪೊಲೀಸ್ ಇಲಾಖೆ ಸದಾ ಸನ್ನದ್ಧಗೊಂಡಿರುತ್ತದೆ ಹಾಗೂ ಈ ಬಗ್ಗೆ ಹೆದ್ದಾರಿ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ಪೊಲೀಸ್ ಠಾಣೆಗೆ ಹೊಣೆಯಿದೆ: ಟ್ರಾಫಿಕ್ ಪೊಲೀಸ್ ಠಾಣೆಯ ವ್ಯವಸ್ಥೆ ಜಾರಿಗೆ ಬಂದ ಬಳಿಕ ಯಾವುದೇ ಅಪಘಾತವಾದರೂ ಟ್ರಾಫಿಕ್ ಪೊಲೀಸರೇ ಬಂದು ಅದನ್ನು ದಾಖಲಿಸಬೇಕೆಂದು ಸ್ಥಳೀಯ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸುವುದರಿಂದ ತುರ್ತು ಸ್ಪಂದನ ದೊರೆಯುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ರೆಡ್ಡಿಯವರು, ಅಪಘಾತ ಪ್ರಕರಣದ ದಾಖಲಾತಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ. ಅದು ಕೇವಲ ಟ್ರಾಫಿಕ್ ಠಾಣಾ ಕೆಲಸವಲ್ಲ. ಅಪಘಾತಕ್ಕೀಡಾದ ವಾಹನಗಳನ್ನು ನ್ಯಾಯಾಲಯದಲ್ಲಿ ಬಿಡಿಸುವಾಗ ಮಾತ್ರ ನ್ಯಾಯಾಲಯದೊಂದಿಗೆ ಟ್ರಾಫಿಕ್ ಠಾಣಾ ಪೊಲೀಸರು ವ್ಯವಹರಿಸುತ್ತಾರೆ ವಿನಹ ಯಾವುದೇ ಅಪಘಾತ ಪ್ರಕರಣಗಳನ್ನು ದಾಖಲಿಸಲು ಎಲ್ಲ ಪೊಲೀಸ್ ಠಾಣೆಗೆ ಅವಕಾಶವಿದೆ. ಮಾತ್ರವಲ್ಲ ಅವರು ದಾಖಲಿಸಲೇಬೇಕಾಗುತ್ತದೆ. ಅಪಘಾತ ಪ್ರಕರಣಗಳನ್ನು ದಾಖಲಿಸಲು ಅನ್ಯ ಪೊಲೀಸ್ ಠಾಣೆಗಳು ನಿರಾಕರಿಸಿದ ಒಂದೇ ಒಂದು ಪ್ರಕರಣವನ್ನು ತೋರಿಸಿ, ತಪ್ಪಿತಸ್ಥ ಅಧಿಕಾರಿಯ ಮೇಲೆ ತಕ್ಷಣ ಕ್ರಮ ಜರಗಿಸುತ್ತೇವೆ ಎಂದರು. ಈ ಹಿನ್ನೆಲೆಯಲ್ಲಿ ಪುತ್ತೂರು ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿರುವ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿಯೂ ಅಪಘಾತ ಪ್ರಕರಣಗಳು ಸಹಜವಾಗಿ ಮೊದಲಿನಂತೆಯೇ ದಾಖಲುಗೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಹೆಚ್ಚುವರಿ ಎಸ್ಪಿ ಸದಾನಂದ ವರ್ಣೇಕರ್ ಸಹಿತ ಹಲವಾರು ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು.