ಖರ್ಚು ವೆಚ್ಚ ಮಾಹಿತಿ ನೀಡದಿದ್ದರೆ ಸೂಕ್ತ ಕ್ರಮ
ಮಂಗಳೂರು: ಸೆಕ್ಷನ್ 10ಎ ಪ್ರಕಾರ ಚುನಾವಣಾ ವೆಚ್ಚ ವಿವರವನ್ನು ಕಾಲ ಮಿತಿಯೊಳಗೆ ನಿಗದಿತ ಮಾದರಿಯಲ್ಲಿ ನೀಡದಿದ್ದರೆ, ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಚುನಾವಣಾ ಖರ್ಚುವೆಚ್ಚದ ಉಸ್ತುವಾರಿ ಪಂಕಜ್ ಕುಮಾರ್ ಪಾಂಡೆ ಹೇಳಿದ್ದಾರೆ.
ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಸ್ವೀಕಾರ ಪ್ರಕ್ರಿಯೆ ಪ್ರಾರಂಭವಾದ ಹಿನ್ನಲೆಯಲ್ಲಿ ಮಾಹಿತಿಯನ್ನು ಚುನಾವಣಾ ವೆಬ್ಸೈಟ್ಗೆ ಅಪ್ಲೋಡ್ ಮಾಡುವ ಕುರಿತು ಶುಕ್ರವಾರ ಅಧಿಕಾರಿಗಳ ಜತೆ ವಿಡಿಯೋ ಕಾನ್ಫಿರೆನ್ಸ್ ನಡೆಸಿದರು.
ಸೆಕ್ಷನ್ 77,78ರ ಪ್ರಕಾರ ಚುನಾವಣಾ ಖರ್ಚುವೆಚ್ಚ ವೀಕ್ಷಣೆ, ಸೆಕ್ಷನ್ 127ಎ ಅಡಿಯಲ್ಲಿ ಮುದ್ರಣ ಸಾಮಾಗ್ರಿ, ಮುದ್ರಕರ ಮಾಹಿತಿ ಇಲ್ಲದೆ ಮುದ್ರಿಸಬಾರದು. ಎಲ್ಲ ಪ್ರಚಾರ ಸಾಮಾಗ್ರಿಗಳಿಗೆ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು ಎಂದರು.
ಕಾನೂನು ಪ್ರಕಾರ ಮಾಡಬಹುದಾದ ಪ್ರಚಾರ ವೆಚ್ಚಗಳು ರು. 16 ಲಕ್ಷಗಳಿಗೆ ಸೀಮಿತ. ಹಣ ಹಂಚುವುದು, ಉಡುಗೊರೆ ನೀಡುವುದು, ಸರಾಯಿ ಹಂಚಿಕೆಯಂಥ ಅಕ್ರಮಗಳಿಗೆ ಚುನಾವಣಾ ಆಯೋಗ ಅವಕಾಶ ನೀಡುವುದಿಲ್ಲ ಎಂದರು.
ಎಲ್ಲ ವಾಹನಗಳ ತಪಾಸಣೆ ಕಡ್ಡಾಯ. ಈಗಾಗಲೇ ಜಿಲ್ಲೆಗೆ ಮೂವರು ಚುನಾವಣಾ ಖರ್ಚುವೆಚ್ಚ ವೀಕ್ಷಕರು ಆಗಮಿಸಿದ್ದು, ಎಲ್ಲ ಬೆಳವಣಿಗೆಗಳನ್ನು ಗಮನಿಸುವರು ಎಂದು ಹೇಳಿದರು.
ನಂತರ ಜಿಲ್ಲಾ ಚುನಾವಣಾಧಿಕಾರಿಗಳ ಜತೆ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಮಾತುಕತೆ ನಡೆಸಿ, ಮಾಹಿತಿ ನೀಡಿದರು.