ತೈಲ ಕಂಪನಿಗಳ ಸ್ಪಂದನಕ್ಕೆ ಆಗ್ರಹಿಸಿ ನಾಗರಿಕ ಸಮಿತಿ ಪ್ರತಿಭಟನೆ
ಉಪ್ಪಿನಂಗಡಿ: ಅಡುಗೆ ಅನಿಲ ಟ್ಯಾಂಕರ್ ಅವಘಡದಿಂದ ಮೃತಪಟ್ಟ, ನಿರ್ಗತಿಕರಾದ ಕುಟುಂಬಗಳ ಬಗ್ಗೆ ಸಂಬಂಧಿತ ತೈಲ ಕಂಪೆನಿಯಿಂದ ಯಾವುದೇ ಸ್ಪಂದನವಿಲ್ಲದೆ ಅಮಾನವೀಯ ನಿರ್ಲಕ್ಷ್ಯ ನೀತಿಯನ್ನು ಅನುಸರಿಸುತ್ತಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ನಾಗರಿಕ ಸಮಿತಿ ದಿಢೀರ್ ಪ್ರತಿಭಟನೆ ನಡೆಸಿ ಟ್ಯಾಂಕರ್ಗಳ ಸಂಚಾರಕ್ಕೆ ತಡೆಯೊಡ್ಡಿದ ಘಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿಯ ಮುಂದಾಳು, ಉದ್ಯಮಿ ಅಶೋಕ್ ಕುಮಾರ್ ರೈ, ಒಂಬತ್ತು ಮುಗ್ಧ ಜೀವಗಳು ಬಲಿಯಾದರೂ ಮಾನವೀಯ ಕಾರಣದಿಂದಲಾದರೂ ಗಮನಹರಿಸದ ತೈಲ ಕಂಪೆನಿಗಳ ನಡವಳಿಕೆ ಸ್ವೀಕಾರ ಯೋಗ್ಯವಲ್ಲ. ಸಂತ್ರಸ್ತರ ಬಗ್ಗೆ ಸ್ಪಂದನ ತೋರಲೇ ಬೇಕು. ಇಲ್ಲವಾದರೆ ತೈಲ ಕಂಪೆನಿಯ ಪ್ರಧಾನ ಗೇಟಿನಲ್ಲಿ ಜನರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೃತರ ಕುಟುಂಬಕ್ಕೆ ಅಗತ್ಯ ಹಣಕಾಸಿನ ನೆರವು, ಮೃತರ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಹಾಗೂ ಉದ್ಯೋಗ ಒದಗಿಸುವುದು, ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ ಸಮಿತಿ, ಬೇಡಿಕೆ ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ತೈಲ ಕಂಪೆನಿಗಳಿಂದ ಸೂಕ್ತ ಸ್ಪಂದನವನ್ನು ಪಡೆಯಲು ಕಾನೂನು ಕ್ರಮ ಕೈಗೊಳ್ಳುವ ಭರವಸೆ ಸರ್ಕಾರಿ ಅಧಿಕಾರಿಗಳಿಂದ ದೊರೆತ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ನಾಗರಿಕ ಸಮಿತಿಯ ಕಾರ್ಯಾಧ್ಯಕ್ಷ, ಪೆರ್ನೆ ಪಂಚಾಯತ್ ಅಧ್ಯಕ್ಷ ತೋಯಾಜಾಕ್ಷ ಶೆಟ್ಟಿ, ಮಿತ್ರದಾಸ ರೈ, ಮಠಂತಬೆಟ್ಟು ನಿರಂಜನ, ವೇದನಾಥ ಸುವರ್ಣ, ಮುರಳೀಧರ, ರೂಪೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ಅಪಘಾತಕ್ಕೀಡಾದ ಟ್ಯಾಂಕರ್ ತೆರವು: ಅಪಘಾತಕ್ಕೀಡಾಗಿದ್ದ ಅನಿಲ ಟ್ಯಾಂಕರ್ ಅನ್ನು ಶುಕ್ರವಾರ ಕ್ರೇನ್ ಮೂಲಕ ಮೇಲೆತ್ತಿ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ದುರ್ಘಟನೆಯಲ್ಲಿ ಬಲಿಯಾಗಿ ಕೊಳೆತು ನಾರುತ್ತಿದ್ದ ಹದಿಮೂರು ಕೋಳಿ, ಎರಡು ಆಡು, ಮೂರು ಬೆಕ್ಕಿನ ದೇಹಗಳನ್ನು ಪಂಚಾಯತ್ ಸದಸ್ಯರೇ ತೆರವುಗೊಳಿಸಿ ದಫನ ಮಾಡಿದರು.
ಸರ್ಕಾರದ ತ್ವರಿತ ಸ್ಪಂದನಕ್ಕೆ ಆಗ್ರಹಿಸಿ ರೈತ ಸಂಘ ಧರಣಿ: ಟ್ಯಾಂಕರ್ ಅಪಘಾತದಿಂದ ಬಲಿಯಾದವರ ಕುಂಟುಬಕ್ಕೆ, ಗಾಯಗೊಂಡವರು ಹಾಗೂ ನಿರ್ಗತಿಕರಾದವರಿಗೆ ಸರ್ಕಾರಿ ವ್ಯವಸ್ಥೆಯಿಂದ ಈವರೆಗೆ ಯಾವುದೇ ರೀತಿಯ ಪರಿಹಾರನ್ನು ವಿತರಿಸಿಲ್ಲ ಎಂದು ಆರೋಪಿಸಿ ರೈತ ಸಂಘ ಪೆರ್ನೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ, ಸರ್ಕಾರಿ ವ್ಯವಸ್ಥೆಯಿಂದ ಈವರೆಗೆ ಯಾವುದೇ ಬಗೆಯ ಸ್ಪಂದನವನ್ನು ತೋರದಿರುವುದು ಅಮಾನವೀಯ ಎಂದು ಹೇಳಿದರು.
ಮನೆಯಿಲ್ಲ, ಧರಿಸಲು ಬಟ್ಟೆ ಇಲ್ಲ, ತಿನ್ನಲು ಅನ್ನವಿಲ್ಲದೆ ನಿರ್ಗತಿಕರಾಗಿರುವವರ ಬಗ್ಗೆ ಸರ್ಕಾರ ಈವರೆಗೆ ಯಾವುದೇ ಪರಿಹಾರ ಕಾರ್ಯ ಕೈಗೊಂಡಿಲ್ಲ. ಇದು ಅವಘಡಕ್ಕಿಂತಲೂ ಘನಘೋರ ನಿರ್ಲಕ್ಷ್ಯ ಎಂದು ಆರೋಪಿಸಿದ ಅವರು, ತಕ್ಷಣವೇ ತುರ್ತು ಪರಿಹಾರ ನೀಡುಬೇಕು. ಇಲ್ಲದಿದ್ದರೆ ಎಲ್ಲ ಟ್ಯಾಂಕರ್ಗಳ ಸಂಚಾರವನ್ನು ತಡೆಹಿಡಿಯಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರೂಪೇಶ್ ರೈ, ಹರ್ಷ ಜೈನ್ ಮತ್ತಿತರರು ಇದ್ದರು.