ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದ.ಕ. ಜಿಲ್ಲೆಯಲ್ಲಿ 7 ನಾಮಪತ್ರ ಸಲ್ಲಿಕೆ

Lingaraj Badiger
Updated On : 13 Apr 2013, 11:47 am

ಮಂಗಳೂರು:  ದ.ಕ.ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಯ 2ನೇ ದಿನ ಶುಕ್ರವಾರ ಒಟ್ಟು 7 ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಸಿದ ಪಕ್ಷಗಳು ಸಿಪಿಎಂ ಮತ್ತು ಎಸ್‌ಡಿಪಿಐ. ಮಂಗಳೂರು ದಕ್ಷಿಣದಲ್ಲಿ ಸಿಪಿಎಂ ಅಭ್ಯರ್ಥಿ ವಸಂತ ಆಚಾರಿ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ಕ್ಷೇತ್ರಕ್ಕೆ ಸಿಪಿಎಂ ಅಭ್ಯರ್ಥಿ ಕೃಷ್ಣಪ್ಪ ಸಾಲ್ಯಾನ್ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಒಂದು ನಾಮಪತ್ರ ಪಕ್ಷೇತರವಾಗಿ ಸಲ್ಲಿಸಿದ್ದಾರೆ. ಬಂಟ್ವಾಳದಲ್ಲಿ ಹಾಗೂ ಪುತ್ತೂರಿನಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ತಲಾ ಎರಡು ನಾಮಪತ್ರ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬಂಟ್ವಾಳ: ಎರಡು ನಾಮಪತ್ರ ಸಲ್ಲಿಕೆ
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಶುಕ್ರವಾರ ಎರಡು ನಾಮಪತ್ರ ಸಲ್ಲಿಕೆಯಾಗುವುದರೊಂದಿಗೆ ಬಂಟ್ವಾಳದಲ್ಲಿ ಚುನಾವಣಾ ಕಣ ರಂಗೇರಿದೆ. ಎಸ್‌ಡಿಪಿಐನಿಂದ ಪುತ್ತೂರಿನ ನ್ಯಾಯವಾದಿ ಅಬ್ದುಲ್ ಮಜಿದ್ ಖಾನ್ ಶುಕ್ರವಾರ ಮಧ್ಯಾಹ್ನ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.  ಇದೇ ಪಕ್ಷದಿಂದ ಅಕ್ಬರ್ ಅಲಿ ಎಂಬವರೂ ಡಮ್ಮಿ ಅಭ್ಯರ್ಥಿಯಾಗಿಯೂ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ತಲಪಾಡಿಯಲ್ಲಿರುವ ಅಲ್ ಖಝಾನ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಿತು.  ನಾಮಪತ್ರ ಸಲ್ಲಿಕೆ ಸಂದರ್ಭ ಅಭ್ಯರ್ಥಿ ಅಬ್ದುಲ್ ಮಜಿದ್ ಖಾನ್, ಅಕ್ಬರ್ ಅಲಿ, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮತ್ತಿತರರು ಇದ್ದರು.

15ರಂದು ಭಟ್ ನಾಮಪತ್ರ ಸಲ್ಲಿಕೆ
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ವಿಧಾನಸಭಾ ಉಪಸಭಾಪತಿ ಎನ್. ಯೋಗಿಶ್ ಭಟ್ ಏ. 15ರಂದು ಮಧ್ಯಾಹ್ನ 12.40 ನಾಮಪತ್ರ ಸಲ್ಲಿಸುವರು. ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಚುನಾವಣೆ ವಿಷಯವಾಗಿ ನಡೆಯಬೇಕಾದ ಕಾರ್ಯವೈಖರಿ ಕುರಿತು ಚರ್ಚಿಸಲಾಯಿತು. ಪಕ್ಷದ ಮುಖಂಡರೊಂದಿಗೆ ಸಮಿತಿಗಳ ರಚನೆ, ಅದರ ಜವಾಬ್ದಾರಿಗಳನ್ನು ತಿಳಿಸಿ, ಚುನಾವಣೆ ನೀತಿ ಸಂಹಿತೆಯ ವಿವರ ನೀಡಲಾಯಿತು. ಮಂಡಲದ ಅಧ್ಯಕ್ಷ ಶ್ರೀಕರ ಪ್ರಭು, ಜಿಲ್ಲಾ ಉಪಾಧ್ಯಕ್ಷ ನಿತಿನ್ ಕುಮಾರ್, ಚುನಾವಣಾ ಸಮಿತಿ ಸಂಚಾಲಕ ಸತೀಶ್ ಪ್ರಭು ಹಾಜರಿದ್ದರು.

15ರಂದು ರಾಜೇಶ್ ನಾಮಪತ್ರ ಸಲ್ಲಿಕೆ
ಬಂಟ್ವಾಳ: ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಅವರು 15ರಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕ್ಷೇತ್ರ ಬಿಜೆಪಿ ಚುನಾವಣಾ ಮಾಧ್ಯಮ ಪ್ರಮುಖ್ ದಿನೇಶ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಬಳಿಕ ಬಿ.ಸಿ. ರೋಡಿನ ಪದ್ಮನಾಭ ನಗರದ ಶ್ರೀನಿವಾಸ್ ರಾವ್ ವೇದಿಕೆಯಲ್ಲಿ ಅಭ್ಯರ್ಥಿ ರಾಜೇಶ್ ನಾಯ್ಕ ರವರ ಬೃಹತ್ ಚುನಾವಣಾ ಪ್ರಚಾರ ಸಭೆಯು ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಧರ್ಮೇಂದ್ರ ಪ್ರಧಾನ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.  

ಸಿಪಿಐಎಂ ಅಭ್ಯರ್ಥಿ ನಾಮಪತ್ರ
ಮಂಗಳೂರು: ಸಿಪಿಐಎಂ ಪಕ್ಷದ ಅಭ್ಯರ್ಥಿ ವಸಂತ ಆಚಾರಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದು, ಶುಕ್ರವಾರ ಬೆಳಗ್ಗೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಪಕ್ಷದ ಮೈದಾನ ಕಚೇರಿಯಿಂದ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ  ಪಾಲಿಕೆಯ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಾಯಿತು. ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸುವಂತೆ ಕೋರಿದರು. ನಾಮಪತ್ರ ಸಲ್ಲಿಕೆ ಸಂದರ್ಭ ಸಿಪಿಎಂನ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ. ಮಾಧವ, ನಗರ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ನಗರ ದಕ್ಷಿಣ ಚುನಾವಣಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೊಂಚಾಡಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement