ಮಲಬಾರಿ ಹಲ್ಲೆ ಮಾಡಿದ್ರೆ ಕೇಸ್ ಇಲ್ಲ!
ಮಂಗಳೂರು: ಜೈಲ್‌ನಲ್ಲಿ ಕೈದಿ ಮುನೀರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಈ ಬಗ್ಗೆ ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ಹೇಳುವುದು ಹೀಗೆ. ಹಲ್ಲೆ ಜೈಲ್ ಒಳಗೆ ನಡೆದಿದ್ದರೆ ಒಂದೋ ಜೈಲರ್ ಅಥವಾ ಹಲ್ಲೆಗೆ ಒಳಗಾದ ಕೈದಿ ದೂರು ನೀಡಬೇಕು. ಇಲ್ಲಿ ಇಬ್ಬರೂ ದೂರು ನೀಡಿಲ್ಲ. ಹೀಗಾಗಿ ನಮಗೆ ಪ್ರಕರಣ ದಾಖಲಿಸಲು ಆಗುವುದಿಲ್ಲ.
ಈ ಹೇಳಿಕೆಯಿಂದಾಗಿ ರಶೀದ್ ಮಲಬಾರಿ ಭೀತಿ ಕೇವಲ ಕೈದಿಗಳಿಗೆ ಮಾತ್ರವಲ್ಲ ಅಲ್ಲಿನ ಜೈಲರ್‌ಗಳಿಗೂ ಇದೆ ಎಂದಾಯಿತು. ಕೈದಿ ವೆನ್‌ಲಾಕ್ ಆಸ್ಪತ್ರೆಯ ಸೆಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಪ್ರಕರಣ ದಾಖಲಾಗದೆ ಇರುವುದು ಕುಖ್ಯಾತ ಪಾತಕಿಗಳ ಕೈ ಮೇಲಾಗುತ್ತಿರುವುದಕ್ಕೆ ಇದು ಉದಾಹರಣೆ.
ಜೈಲ್ ಅಧೀಕ್ಷಕ ದೊಡ್ಡಕಾಮಯ್ಯ ರಜೆ ಮೇಲೆ ಬೆಂಗಳೂರಿಗೆ ತೆರಳಿದ್ದಾರೆ. ಈ ಬಗ್ಗೆ ಜೈಲಿಗೆ ಕರೆ ಮಾಡಿ ಕೇಳಿದಾಗ, 'ಗಲಾಟೆ ಆಗಿದ್ದು ಹೌದು ಬರ್ಕೆ ಠಾಣೆಯಲ್ಲಿ ಕೇಸು ಆಗಿರಬೇಕು ನೋಡಿ' ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ಕರೆ ಮಾಡಿದರೆ 'ಇಲ್ಲ ನಮ್ಮಲ್ಲಿ ಜೈಲ್ ಗಲಾಟೆಯ ಯಾವುದೇ ಪ್ರಕರಣ ದಾಖಲಾಗಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.