ಗುತ್ತಿಗೆದಾರ ಗೋಪಾಲಕೃಷ್ಣ ವಿರುದ್ಧ ಕೇಸು; ಸಂಘ ಖಂಡನೆ
ಸುಳ್ಯ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಧಿಕ ಮೊತ್ತದ ಹಣ ಸಾಗಿಸುತ್ತಿದ್ದ ಗುತ್ತಿಗೆದಾರ ಕೆ.ಎಸ್. ಗೋಪಾಲಕೃಷ್ಣ ಎಂಬವರ ಮೇಲೆ ಪೊಲೀಸರು ಕೇಸು ದಾಖಲಿಸಿರುವುದನ್ನು ಸುಳ್ಯ ತಾಲೂಕು ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಗುತ್ತಿಗೆದಾರರ ಸಂಘ ಖಂಡಿಸಿದೆ. ಸುಳ್ಯದಲ್ಲಿ ಸುದ್ದಿಗೋಷ್ಟಿಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಬಾಳುಗೋಡು, ನಮ್ಮ ಸಂಘದ ಗೌರವಾಧ್ಯಕ್ಷರೂ ಆಗಿರುವ ಕೆ.ಎಸ್. ಗೋಪಾಲಕೃಷ್ಣರನ್ನು ನೀತಿ ಸಂಹಿತೆ ಉಲ್ಲಂಘನೆ ಹೆಸರಲ್ಲಿ ಕೇಸಿಗೊಳಪಡಿಸಿರುವುದು ಪೊಲೀಸರ ಬಾಲಿಶ ವರ್ತನೆಯಾಗಿದೆ. ಗೋಪಾಲಕೃಷ್ಣರು ವಾರ್ಷಿಕ ಸುಮಾರು 10-12 ಕೋಟಿ ವ್ಯವಹಾರ ಮಾಡುವಾಗ ವಾರದಲ್ಲಿ 10-15 ಲಕ್ಷಗಳ ವ್ಯವಹಾರ ಇದ್ದೇ ಇರುತ್ತದೆ. ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಚುನಾವಣಾ ನೀತಿ ಸಂಹಿತೆ ಬಾಧಕವಾಗುವುದಿಲ್ಲ ಹೀಗಾಗಿ ಪೊಲೀಸರ ಕ್ರಮ ಖಂಡನೀಯ ಎಂದರು. ಗುತ್ತಿಗೆದಾರರ ಸಂಘದ ಸುಭೋದ್ ಶೆಟ್ಟಿ, ಚಂದ್ರಶೇಖರ ಅಡ್ಪಂಗಾಯ, ನವೀನ್ ಸುಳ್ಳಿ, ಮಂಜುನಾಥ್, ಬಾಲಚಂದ್ರ ಪತ್ರಿಕಾಗೋಷ್ಟಿಯಲ್ಲಿದ್ದರು.