ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗ್ಯಾಸ್ ಅಕ್ರಮ ಮಾರಾಟ: ಬಂಧನ

Vishwanath S
Updated On : 14 Apr 2013, 12:17 pm

ಮಂಗಳೂರು: ಅಕ್ರಮವಾಗಿ ಗ್ಯಾಸ್ ಸಾಗಾಟ ಮಾಡುತ್ತಿದ್ದ ಉಳ್ಳಾಲ ಕೋಡಿಯ ಹನೀಫ್ ಎಂಬಾತನನ್ನು ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 20 ಸಣ್ಣ ಗ್ಯಾಸ್ ಮತ್ತು 2 ದೊಡ್ಡ ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ಅಪಹರಿಸಿ ಹಣ ಸುಲಿಗೆ
ಮಂಗಳೂರು: ವ್ಯಕ್ತಿಯೊಬ್ಬನನ್ನು ನಾಲ್ವರು ಅಪರಿಚಿತರು ಕಾರಿನಲ್ಲಿ ಅಪಹರಿಸಿ ಚಿನ್ನ, ಹಣ, ಮೊಬೈಲ್ ದೋಚಿ ಪರಾರಿಯಾದ ಘಟನೆ ಶುಕ್ರವಾರ ತಡರಾತ್ರಿ ಪಂಪುವೆಲ್‌ನ ಮಹಾವೀರ ವೃತ್ತದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಎನ್.ಎಂ. ಯೋಗಿಶ್ ಒಮೇಗಾ ಆಸ್ಪತ್ರೆಯ ಮುಂಭಾಗ ಸ್ನೇಹಿತನಿಗಾಗಿ ಕಾಯುತ್ತಿದ್ದಾಗ, ಮಾರುತಿ ಕಾರಿನಲ್ಲಿ ಬಂದ ಅಪರಿಚಿತ ನಾಲ್ವರುಬಲವಂತವಾಗಿ ಅಪಹರಿಸಿ ಬೆಂಗಳೂರು ಹೆದ್ದಾರಿಯಲ್ಲಿ ಕರೆದೊಯ್ದಿದ್ದಾರೆ.
ರು. 30 ಸಾವಿರ ನೀಡುವಂತೆ ಪೀಡಿಸಿದ ವ್ಯಕ್ತಿಗಳು, ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಡಿಪೋದ ಬಳಿ ಯೋಗಿಶ್ ಅವರಿಂದ ಎಟಿಎಂ ಕಿತ್ತುಕೊಂಡು ಹಣ ಇದೆಯಾ ಎಂಬುದಾಗಿ ಪರಿಶೀಲಿಸಿದ್ದಾರೆ. ಹಣ ದೊರಕದಿದ್ದಾಗ ಕುತ್ತಿಗೆಯಲ್ಲಿದ್ದ 20 ಗ್ರಾಂನ ಚಿನ್ನದ ಚೈನ್, ರು. 50ಸಾವಿರ ಮೌಲ್ಯದ ಮೊಬೈಲ್, ಪರ್ಸ್‌ನಲ್ಲಿದ್ದ 5ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ.
ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಅಧಿಕಾರ ದುರುಪಯೋಗ ಆರೋಪ: ದೂರು
ಪುತ್ತೂರು: ಪುತ್ತೂರಿನಲ್ಲಿ ಬಿಜೆಪಿ ಚುನಾವಣಾ ಸಿದ್ಧತಾ ಸಭೆಯಲ್ಲಿ ಭಾಗವಹಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಆರೋಪದಲ್ಲಿ ರಾಜ್ಯ ಲೋಕಸೇವಾ ಆಯೋಗ ಸದಸ್ಯ ಎಸ್.ಆರ್. ರಂಗಮೂರ್ತಿ ಅವರನ್ನು ತಕ್ಷಣ ಆ ಸ್ಥಾನದಿಂದ ವಜಾಗೊಳಿಸಲು ಕ್ರಮಕೈಗೊಳ್ಳಬೇಕೆಂದು ಪುತ್ತೂರಿನ ನಾಗರಿಕರೊಬ್ಬರು ರಾಜ್ಯಪಾಲ ಮತ್ತು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ನಿವಾಸದಲ್ಲಿ ಏ.7ರಂದು ನಡೆದಿದ್ದ ಬಿಜೆಪಿ ಚುನಾವಣಾ ಸಿದ್ಧತಾ ಸಭೆಯಲ್ಲಿ ರಂಗಮೂರ್ತಿ ಭಾಗವಹಿಸಿ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ.  ಆ ಮೂಲಕ ಸಂವಿಧಾನಾತ್ಮಕವಾಗಿ ರಚಿಸಿದ ಗೌರವಾನ್ವಿತ ಸಂಸ್ಥೆಯಲ್ಲಿನ ತಮ್ಮ ಸ್ಥಾನದ ದುರುಪಯೋಗ ಮಾಡಿದ್ದಾರೆ ಎಂದು ಪುತ್ತೂರಿನ ರಾಜಾರಾಮ ಶೆಟ್ಟಿ ಎಂಬವರು ಸಾರ್ವಜನಿಕರ ಪರವಾಗಿ ದೂರು ನೀಡಿದ್ದಾರೆ.  ಲೋಕಸೇವಾ ಆಯೋಗದ ತಮ್ಮ ಸ್ಥಾನದ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಅವರನ್ನು ತಕ್ಷಣ ಆ ಸ್ಥಾನದಿಂದ ವಜಾಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಅಪಘಾತ: ನವ ವಿವಾಹಿತ ಸಾವು
ಪುತ್ತೂರು: ಪುತ್ತೂರು ಕಾಣಿಯೂರು ರಸ್ತೆಯಲ್ಲಿ ಭಕ್ತಕ್ಕೋಡಿ ಸಮೀಪದ ಗಡಪಿಲ ಕೈಪಳ ಎಂಬಲ್ಲಿ ಶನಿವಾರ ಅಪರಾಹ್ನ ಸ್ಕೂಟರೊಂದು ಅಫಘಾತಕ್ಕೀಡಾಗಿ ನವ ವಿವಾಹಿತರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಸರ್ವೆ ಗ್ರಾಮದ ಭಕ್ತಕ್ಕೋಡಿ ಸಮೀಪದ ಕರಂಬಾರು ನಿವಾಸಿ ಸುಂದರ ಪೂಜಾರಿ ಎಂಬವರ ಪುತ್ರ ಪ್ರದೀಪ್ .ಕೆ (24) ಮೃತರು. ಪ್ರದೀಪ್ ಅವರು ತನ್ನ ಮನೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ ಗಡಪಿಲ ಸಮೀಪದ ಕೈಪಳ ಎಂಬಲ್ಲಿರುವ ರೇಲ್ವೆ ಮೇಲ್ಸೇತುವೆ ಬಳಿ ಪುತ್ತೂರು ಕಾಣಿಯೂರು ರಸ್ತೆಗೆ ಅಳವಡಿಸಲಾಗಿದ್ದ ಹೈಟ್ಗೇಜ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಪ್ರದೀಪ್ ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
  ಪ್ರದೀಪ್ ಅವರಿಗೆ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪಳ್ಳತ್ತಾರು ಎಂಬಲ್ಲಿನ ಯುವತಿಯೊಂದಿಗೆ ವಿವಾಹವಾಗಿತ್ತು. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಂದು ಬಂಟ್ವಾಳ ತಾಲೂಕು ಬಂಟರ ಕ್ರೀಡೋತ್ಸವ
ಬಂಟ್ವಾಳ: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟ್ವಾಳ ಎಲ್ಲಾ ವಲಯ ಬಂಟರ ತಾಲೂಕು ಮಟ್ಟದ ಸಹಯೋಗದಲ್ಲಿ ತೃತೀಯ ವರ್ಷದ ತಾಲೂಕು ಮಟ್ಟದ ಬಂಟರ ಕ್ರೀಡೋತ್ಸವ ಏ.14ರಂದು ಬಿ.ಸಿ ರೋಡಿಗೆ ಸಮೀಪದ ಬ್ರಹ್ಮರಕೊಟ್ಲುವಿನ ಬಂಟರ ಸಂಘದ ನಿವೇಶನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಫರಂಗಿಪೇಟೆ: ಇಂದು ಭದ್ರಗಿರಿ ಹರಿಕೀರ್ತನೆ
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಸೌರಯುಗಾದಿ- ವಿಷು ಹಬ್ಬದ ಪ್ರಯುಕ್ತ ಸಂತ ಭದ್ರಗಿರಿ ಅಚ್ಯುತದಾಸರಿಂದ ಹರಿಕೀರ್ತನೆ ಏ.14ರಂದು ಸಂಜೆ 4 ಗಂಟೆಗೆ ಫರಂಗಿಪೇಟೆ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೆ.ಪೂಂಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

20 ರಿಂದ ಅಂಧರಿಗೆ ಸ್ವ ಉದ್ಯೋಗ ತರಬೇತಿ
ಮಂಗಳೂರು: ಸೇವಾ ಭಾರತಿ ವತಿಯಿಂದ ರೋಮನ್ ಮತ್ತು ಕ್ಯಾಥರಿನ್ ಅಂಧ ಶಾಲೆಯಲ್ಲಿ ಮಂದ ದೃಷ್ಟಿಯವರಿಗೆ ಏ. 20ರಿಂದ ಮೇ. 20ರವರೆಗೆ ಉಚಿತ ಸ್ವಉದ್ಯೋಗ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಪರಿಣಿತರಿಂದ ಚಲನವಲನ, ಬ್ರೈಲ್‌ಲಿಪಿ ಬಳಕೆ, ಕಂಪ್ಯೂಟರ್ ಬಳಕೆ, ಸ್ವಉದ್ಯೋಗ ತರಬೇತಿ ನೀಡಲಾಗುವುದು. ಪ್ರವೇಶ ಉಚಿತವಾಗಿದ್ದು, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ.ಯು.ವಿ. ಶೆಣೈ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.  ಇದರೊಂದಿಗೆ 1 ರಿಂದ 10ನೇ ತರಗತಿ ಸೇರಲು ಬಯಸುವ ಅಂಧ ಮತ್ತು ಮಂದ ದೃಷ್ಟಿಯಿರುವ ಮಕ್ಕಳಿಗೆ ಶಾಲಾ ಪ್ರವೇಶ ಆರಂಭವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9845047785 ಸಂಪರ್ಕಿಸಿ.

ಇಂದು ಯೋಗ ಶಿಬಿರ
ಮಂಗಳೂರು: ಆವಿಷ್ಕಾರ ಯೋಗ ಕೇಂದ್ರದ ವತಿಯಿಂದ ಏ. 14 ರಂದು ಬಿಜೈನಲ್ಲಿ ಉಚಿತ ವೈದಿಕ ಚಿಕಿತ್ಸೆ ಮತ್ತು ಬೇಸಿಗೆ ಯೋಗ ಶಿಬಿರ ನಡೆಯಲಿದೆ.ಸಂಜೆ 4.30ಕ್ಕೆ ಚಿಕ್ಕಮಗಳೂರಿನ ಕೆ.ಎಸ್. ನಿತ್ಯಾನಂದ ಅವರು ಶಿಬಿರವನ್ನು ನಡೆಸಿಕೊಡುವರು. ಯೋಗದಲ್ಲಿ ಆಹಾರ-ಆಚಾರದೊಂದಿಗೆ ಯೋಗ ಕ್ರಿಯೆ, ಸೂರ್ಯ ನಮಸ್ಕಾರ ಆಸನ, ಪ್ರಾಣಾಯಾಮ, ಧ್ಯಾನ, ವಿಶ್ರಾಂತಿ ತರಬೇತಿ ನಡೆಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊ. 9845588740 ಸಂಪರ್ಕಿಸಬಹುದು.

ಇಂದು ಮೌನ ಪ್ರತಿಭಟನೆ ರದ್ದು
ಮಂಗಳೂರು: ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಹೆಸರಿನ ವಿಶ್ವವಿದ್ಯಾಲಯ ಸ್ಥಾಪನೆಗೆ ವಿರೋಧಿಸಿ ಏ. 14 ರಂದು ಸಂಜೆ 4ಕ್ಕೆ ಫರಂಗಿಪೇಟೆಯ ನೆತ್ತರುಕೆರೆಯಲ್ಲಿ ನಡೆಯಬೇಕಿದ್ದ 'ಮೌನ ಪ್ರತಿಭಟನಾ ಮೆರವಣಿಗೆ' ಯನ್ನು ರದ್ದು ಪಡಿಸಲಾಗಿದೆ. ಮೌನ ಪ್ರತಿಭಟನೆಯಲ್ಲಿ ಭಾಗವಹಿಸಲು ಕುಶಾಲನಗರ, ಮಡಿಕೇರಿ, ಹುಣಸೂರು, ಕೋಲಾರ, ಬೆಂಗಳೂರಿನಿಂದ ಕ್ರೈಸ್ತ ಬಾಂಧವರು ಆಗಮಿಸಬೇಕಿತ್ತು. ಆದರೆ ಚುನಾವಣೆ ಪ್ರಯುಕ್ತ ಕಾರ್ಯಕ್ರಮ ರದ್ದು ಪಡಿಸುವಂತೆ ಮಂಗಳೂರು ಬಿಷಪ್ ಆದೇಶ ನೀಡಿದ್ದು, ಕಾರ್ಯಕ್ರಮ ರದ್ದು ಪಡಿಸಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಟಿ.ಜೆ. ಅಬ್ರಹಾಂ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮೂಡುಬಿದಿರೆ ಉಮನಾಥ್  ಎಂ. ಸುವರ್ಣ ನಾಮಪತ್ರ ಸಲ್ಲಿಕೆ
ಮಂಗಳೂರು: ವಿಧಾನಸಭಾ ಚುನಾವಣೆಗೆ ಮೂಡುಬಿದಿರೆ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಉಮನಾಥ್ ಎಂ ಸುವರ್ಣ ಶನಿವಾರ ಮಧ್ಯಾಹ್ನ 3ಕ್ಕೆ ಮೂಡುಬಿದಿರೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಬೆಳ್ತಂಗಡಿ: ಇಂದು ಚಿರಂಜೀವಿ ಸಂಭ್ರಮ ಕಾರ್ಯಕ್ರಮ
ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ, ಕಡಿರುದ್ಯಾವರ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಮತ್ತು ಸೌರಮಾನ ಯುಗಾದಿಯ ಸಂದರ್ಭದಲ್ಲಿ ಚಿರಂಜೀವಿ ಸಂಭ್ರಮ ಏ.14ರಂದು ನಡೆಯಲಿದೆ. ಇದರಂಗವಾಗಿ ಬೆಳಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಮತ್ತು ಭಜನೆ ನೆರವೇರಲಿದೆ. 11 ಗಂಟೆಗೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತೆದಾರ ಭೀಮೇಶ್ವರ ಜೋಶಿ ಉದ್ಘಾಟಿಸಲಿದ್ದಾರೆ. ಕೊಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವರಾವ್ ಕೆಕ್ಕೆನೇಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಪಾರ್ವತಿ ನಾಣಯ್ಯ, ರೈತ ಬಂಧುವಿನ ಶಿವಶಂಕರ್ ನಾಯಕ್, ಜಗನ್ನಾಥ ಶೆಟ್ಟಿ, ವೆಂಕಟರಮಣ ಭಟ್ ಭಾಗವಹಿಸಲಿದ್ದಾರೆ. ನಾಟಿ ವೈದ್ಯರಾದ ಚನನ ಗೌಡ, ಬಾಬು ಮೊಗೇರ, ಪದ್ಮಯ್ಯ ಗೌಡ ಇವರಿಗೆ ಸನ್ಮಾನ ನಡೆಯಲಿದೆ. ಸಂಜೆ 8 ಗಂಟೆಗೆ ಚಿರಂಜೀವಿ ಸಂಭ್ರಮದ ಸಭಾ ಕಾರ್ಯಕ್ರಮ ನ್ಯಾಯವಾದಿ ಪಿ.ಪಿ. ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಳಿಕ ಸನಾತನ ನಾಟ್ಯಾಲಯದವರಿಂದ ರಾಷ್ಟ್ರದೇವೋಭವ ನೃತ್ಯ ವೈವಿಧ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement