ಡಾ.ಅ.ಸುಂದರಗೆ ಗುರುರಾಜ ಭಟ್ ಪ್ರಶಸ್ತಿ ಪ್ರದಾನ
ಉಡುಪಿ: ಖ್ಯಾತ ಪುರಾತತ್ವಜ್ಞ ಡಾ.ಅ. ಸುಂದರ್ ಅವರಿಗೆ ಡಾ. ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ 'ಡಾ. ಪಾದೂರು ಗುರುರಾಜ ಭಟ್ ಪ್ರಶಸ್ತಿ'ಯನ್ನು ಶನಿವಾರ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಂದರ್, ವಿದ್ವತ್ ಪ್ರಪಂಚದಲ್ಲಿ ಸಂಶೋಧನೆಗಳು ನಡೆದಾಗ ತಪ್ಪಾಗುವುದು ಸಹಜ. ಪ್ರತಿ ದಿನ ಸಂಶೋಧನೆಯಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಹಾಗೆಂದು ಒಮ್ಮೆ ನಡೆದ ಸಂಶೋಧನೆಗಳು ಮತ್ತೆ ಮುಂದುವರಿದಾಗ ಬದಲಾವಣೆಗಳನ್ನು ಕಂಡರೆ ಮೊದಲನೆಯವರು ಮಾಡಿದ ಸಂಶೋಧನೆಯನ್ನು ಅಲ್ಲಗೆಳೆಯುವುದು ಸಾಧ್ಯವಿಲ್ಲ ಎಂದರು. ಹಳ್ಳಿಗಳಲ್ಲಿ ಕಂಡು ಹಿಡಿದ ಅನೇಕ ಸಂಶೋಧನೆಗಳನ್ನು ನಮ್ಮದು ಎಂದು ಕೆಲವರು ವಾದಿಸುತ್ತಾರೆ. ಆದರೆ, ಅವರು ಸಂಶೋಧಿಸುವ ಮೊದಲು ಅಲ್ಲಿನ ಹಳ್ಳಿಯವರಿಗೆ ಅದು ತಿಳಿದಿರುತ್ತದೆ. ಅದರ ಐತಿಹಾಸಿಕ ವಿಚಾರಗಳು ಅದರಲ್ಲಿಯೂ ಕಾಲ ನಿಷ್ಕರ್ಷೆ ಅವರಿಗೆ ಗೊತ್ತಿರುವುದಿಲ್ಲ ಅಷ್ಟೇ ಎಂದು ಹೇಳಿದರು.