ಬಾಡೂಟ ಆರೋಪ: ಚುನಾವಣಾ ವೀಕ್ಷಕರಿಂದ ತಪಾಸಣೆ
ಮಂಗಳೂರು: ಎನ್ಎಸ್ಯುಐ ಮುಖಂಡರಿಗೆ ಸೇರಿದ ಫ್ಲ್ಯಾಟ್ನಲ್ಲಿ ಚುನಾವಣೆ ನಿಮಿತ್ತ ಬಾಡೂಟ ನೀಡಲಾಗಿದೆ ಎಂಬ ದೂರಿನ ಮೇರೆಗೆ ಚುನಾವಣಾ ಅಧಿಕಾರಿಗಳು, ಶನಿವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಆದರೆ, ಸ್ಥಳದಲ್ಲಿ ಯಾವುದೇ ಅಂತಹ ಊಟ ನೀಡಿದ, ನೀತಿ ಸಂಹಿತೆ ಉಲ್ಲಂಘನೆಗೆ ಪೂರಕ ಅಂಶಗಳು ಕಾಣದ ಕಾರಣ ಅಧಿಕಾರಿಗಳು ಯಾವುದೇ ಪ್ರಕರಣ ದಾಖಲಿಸಲಿಲ್ಲ. ಮುಖಂಡ ತೇಜಸ್ವಿರಾಜ್ ಎಂಬವರು ತಮ್ಮ ಫ್ಲ್ಯಾಟ್ನಲ್ಲಿ ಗೃಹಪ್ರವೇಶ ನಿಮಿತ್ತ ಸರ್ಕ್ಯೂಟ್ ಹೌಸ್ನ ಕಟ್ಟೆ ಫ್ರೆಂಡ್ಸ್ ಮತ್ತಿತರ ಗೆಳೆಯರಿಗೆ ರಾತ್ರಿ ಊಟೋಪಹಾರದ ವ್ಯವಸ್ಥೆ ಮಾಡಿದ್ದರು. ಈ ವೇಳೆ, ಯಾರೋ ಚುನಾವಣಾ ವಿಕ್ಷಕರ ಹೆಲ್ಪ್ಲೈನ್ಗೆ ಕರೆ ಮಾಡಿ ಬಾಡೂಟ ನೀಡಲಾಗುತ್ತಿದೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಯಿತು ಎಂದು ತಿಳಿದುಬಂದಿದೆ.