ಮುಷ್ಕರನಿರತರ ಅಹವಾಲು ಆಲಿಸಿದ ಡಿಸಿ
ಸುಳ್ಯ: ತಮಿಳರಿಗೆ ಜಾತಿ ಸರ್ಟಿಫಿಕೇಟ್, ಮೂರನೇ ತಲೆಮಾರಿಗೆ ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಮಿಳು ಕಾರ್ಮಿಕರು ಸುಳ್ಯ ತಾಲೂಕು ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ತಿಂಗಳು ಪೂರೈಸಿದ್ದು, ಶನಿವಾರ ಜಿಲ್ಲಾಧಿಕಾರಿ ಹರ್ಷಗುಪ್ತಾ ಸ್ಥಳಕ್ಕೆ ಭೇಟಿ ನೀಡಿ ಅವರ ಅಹವಾಲು ಆಲಿಸಿದರು. ಚುನಾವಣೆ ಸಿದ್ಧತೆ ಪರಿಶೀಲಿಸಲು ಸುಳ್ಯಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಪ್ರತಿಭಟನಾ ನಿರತರ ಬಳಿಗೆ ತೆರಳಿ ಮಾತುಕತೆಗೆ ಬರುವಂತೆ ಸೂಚಿಸಿದರು. ಅದರಂತೆ ಕಾರ್ಮಿಕ ಮುಖಂಡರು ತಾಲೂಕು ಕಚೇರಿಯ ಕೊಠಡಿಗೆ ತೆರಳಿ ಮಾತುಕತೆ ನಡೆಸಿದರು. ಕಾರ್ಮಿಕ ಮುಖಂಡರಾದ ಚಂದ್ರಲಿಂಗಂ ಮತ್ತು ಶಿವಕುಮಾರ್ ಕೌಡಿಚ್ಚಾರ್ ತಮ್ಮ ಸಮಸ್ಯೆಗಳನ್ನು ತಿಳಿಸಿದರು. ಸುದೀರ್ಘ ಚರ್ಚೆಯ ಬಳಿಕ ಜಿಲ್ಲಾಧಿಕಾರಿ, ಈ ಸಮಸ್ಯೆ ಪರಿಹಾರ ಜಿಲ್ಲಾಧಿಕಾರಿ ವ್ಯಾಪ್ತಿಯಲ್ಲಿಲ್ಲ. ಜಿಲ್ಲಾಧಿಕಾರಿ ಮಾಡುವುದು ಕಾನೂನು ಆಗುವುದಿಲ್ಲ. ಆದರೆ ನಾವು ಕಾನೂನು ಪ್ರಕಾರವೇ ಮಾಡಬೇಕಾಗಿದೆ ಎಂದರು.