ಸಾಹಿತಿ ಸುಮತಿ ಕೆ.ಸಿ. ಭಟ್ ಆದೂರು ನಿಧನ
ಬೆಳ್ತಂಗಡಿ: ಹಿರಿಯ ಸಾಹಿತಿ, ಸಾಮಾಜಿಕ ಕಳಕಳಿಯ ಸಾಧಕಿ ಸುಮತಿ ಕೆ.ಸಿ. ಭಟ್ ಆದೂರು (60) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಮಧ್ಯಾಹ್ನ ಪೆರಿಂಜೆಯಲ್ಲಿನ ಅವರ ನಿವಾಸದಲ್ಲಿ ನಿಧನ ಹೊಂದಿದರು. ಸುಮತಿ ಸಣ್ಣಕತೆಗಳ ಮೂಲಕ ಸಾಹಿತ್ಯ ಲೋಕದಲ್ಲಿ ಕಳೆದ ಹಲವು ದಶಕಗಳಿಂದ ಗುರುತಿಸಿಕೊಂಡಿದ್ದು, ಸುಮಾರು 600ಕ್ಕೂ ಹೆಚ್ಚು ಸಣ್ಣಕತೆಗಳನ್ನು ಬರೆದಿದ್ದಾರೆ. ನಾಡಿನ ಬಹುತೇಕ ದಿನ ಪತ್ರಿಕೆ, ಮಾಸಿಕ, ವಾರ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಗಡಿನಾಡ ಮತ್ತು ಹೊರನಾಡ ಪತ್ರಿಕೆಗಳಲ್ಲಿ ಬರಹಗಳ ಮೂಲಕ ಜನ ಮನ ಗೆದ್ದಿದ್ದರು. ಈಗಾಗಲೇ ಪ್ರಕಟಿಸಿದ 'ಕಡಲುಂಡಿಯ ಮಡಿಲಲ್ಲಿ' ಮತ್ತು 'ತಂಬೂರಿ' ಕಥಾ ಸಂಕಲನಗಳು ಪ್ರಶಸ್ತಿ ಪುರಸ್ಕೃತವಾಗಿವೆ. ಇನ್ನೊಂದು ಕಥಾ ಸಂಕಲನ ಮತ್ತು ಹೊಸ ರುಚಿ ಕುರಿತ ಕೃತಿಯೊಂದನ್ನು ಪ್ರಕಟಿಸುವ ಸಿದ್ಧತೆಯಲ್ಲಿದ್ದರು. ಸುಮತಿ ಕೆ.ಸಿ. ಭಟ್ ಅವರು ಪತಿ, ನಿವೃತ್ತ ಉಪನ್ಯಾಸಕ ಕೆ. ಚಂದ್ರ ಶೇಖರ ಭಟ್ ಆದೂರು, ಪುತ್ರ, ಪತ್ರಕರ್ತ ಹರೀಶ್ ಕೆ. ಆದೂರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.