ಸಾಹಿತಿ ಸುಮತಿ ಕೆ.ಸಿ. ಭಟ್ ಆದೂರು ನಿಧನ
ಬೆಳ್ತಂಗಡಿ: ಹಿರಿಯ ಸಾಹಿತಿ, ಸಾಮಾಜಿಕ ಕಳಕಳಿಯ ಸಾಧಕಿ ಸುಮತಿ ಕೆ.ಸಿ. ಭಟ್ ಆದೂರು (60) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಪೂರ್ವಾಹ್ನ ಪೆರಿಂಜೆಯಲ್ಲಿನ 'ಹರಿನಿಲಯ'ದಲ್ಲಿ ನಿಧನ ಹೊಂದಿದರು.
ಸುಮತಿ ಸಣ್ಣಕತೆಗಳ ಮೂಲಕ ಸಾಹಿತ್ಯ ಲೋಕದಲ್ಲಿ ಕಳೆದ ಹಲವು ದಶಕಗಳಿಂದ ಗುರುತಿಸಿಕೊಂಡವರು. ಅವರು ಸುಮಾರು 600ಕ್ಕೂ ಹೆಚ್ಚು ಸಣ್ಣಕತೆಗಳನ್ನು ಬರೆದಿದ್ದಾರೆ.
ನಾಡಿನ ಬಹುತೇಕ ದಿನ ಪತ್ರಿಕೆ, ಮಾಸಿಕ, ವಾರ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಗಡಿನಾಡ ಮತ್ತು ಹೊರನಾಡ ಪತ್ರಿಕೆಗಳಲ್ಲಿ ಬರಹಗಳ ಮೂಲಕ ಜನ ಮನ ಗೆದ್ದ ಸುಮತಿಯವರು ಈಗಾಗಲೇ ಪ್ರಕಟಿಸಿದ 'ಕಡಲುಂಡಿಯ ಮಡಿಲಲ್ಲಿ' ಮತ್ತು 'ತಂಬೂರಿ' ಕಥಾ ಸಂಕಲನಗಳು ಪ್ರಶಸ್ತಿ ಪುರಸ್ಕೃತವಾಗಿವೆ.
ಪ್ರಶಸ್ತಿಗಳು: ರಾಜ್ಯ ಹವ್ಯಕ ಸಂಘಟನೆಯವರು ನೀಡಿದ ನಮ್ಮ ಮನೆ ಗೌರವ, ಕೊಡಗಿನ ಗೌರಮ್ಮ ದತ್ತಿ ನಿಧಿ ರಾಜ್ಯ ಪ್ರಶಸ್ತಿ, ಪ್ರೇಮಾ ಭಟ್ ದತ್ತಿ ನಿಧಿ ಪ್ರಶಸ್ತಿ, ಸುವರ್ಣ ಕರ್ನಾಟಕ ಗಡಿನಾಡ ಕನ್ನಡಿಗ ಪ್ರಶಸ್ತಿ, ಇತ್ತೀಚೆಗೆ ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ ಹೀಗೆ ಹತ್ತು ಹಲವು ಗೌರವ ಪುರಸ್ಕಾರಗಳಿಗೆ ಸುಮತಿ ಪಾತ್ರರಾಗಿದ್ದರು. ಸುಮತಿ ಕೆ.ಸಿ. ಭಟ್ ಅವರು ಪತಿ, ನಿವೃತ್ತ ಉಪನ್ಯಾಸಕ ಕೆ. ಚಂದ್ರ ಶೇಖರ ಭಟ್ ಆದೂರು, ಪುತ್ರ, ಪತ್ರಕರ್ತ ಹರೀಶ್ ಕೆ. ಆದೂರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.