ಎಂಡೋ ಸಂತ್ರಸ್ತರಿಂದ 'ವಿಧಾನಸೌಧ ಚಲೋ'
ಉಪ್ಪಿನಂಗಡಿ: ಯಾರದ್ದೋ ದುರಾಸೆಗೆ ಸಿಲುಕಿ ತಮ್ಮ ಬದುಕು ಮುದುಡಿಸಿಕೊಂಡ ಎಂಡೋಸಲ್ಫಾನ್ ಪೀಡಿತರ ನೋವಿಗೆ ಈ ಹಿಂದಿನ ಸರ್ಕಾರ ಸೂಕ್ತವಾದ ಸ್ಪಂದನೆ ಮತ್ತು ಪರಿಹಾರವನ್ನು ಬಜೆಟ್ನಲ್ಲಿ ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ ಮೇ 21ರಂದು, ಎಂಡೋ ಸಂತ್ರಸ್ತರು 'ವಿಧಾನಸೌಧ ಚಲೋ' ಕಾರ್ಯಕ್ರಮ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ. ಬವಣೆಗೀಡಾದ ಎಂಡೋ ಸಂತ್ರಸ್ತರು ಸ್ವಇಚ್ಛೆಯಿಂದ ಹೋರಾಟದ ಹಾದಿ ಹಿಡಿದು ತಮ್ಮ ಅಹವಾಲು ಸಲ್ಲಿಸುವುದಕ್ಕಾಗಿ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.
ಆಗ್ರಹ ಏನು?: ಹೊಸದಾಗಿ ರಚನೆಯಾಗುವ ಸರ್ಕಾರಕ್ಕೆ ಪ್ರಾರಂಭದಲ್ಲೆ ಎಂಡೋ ಪೀಡಿತರ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಶೀಘ್ರವಾಗಿ ಸ್ಪಂದಿಸಲೇಬೇಕಾದ ಅನಿವಾರ್ಯತೆ ಎತ್ತಿತೋರಿಸುವ ಮತ್ತು ಶೀಘ್ರ ಪರಿಹಾರ ಕೊಡುವ ಮೂಲಕ ಸರ್ಕಾರ ಇನ್ನಾದರೂ ರಾಜ್ಯದ ಅತಿ ದೊಡ್ಡ ದುರಂತದೆಡೆಗೆ ಗಮನ ಹರಿಸಬೇಕೆನ್ನುವ ಆಗ್ರಹ ಈ ಹೋರಾಟದ್ದಾಗಿದೆ ಎಂದು ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ತಿಳಿಸಿದರು.