ಕಾರ್ಮಿಕರಿಗೆ ಸೂಕ್ತ ವೇತನ ಇಲ್ಲ: ಆರೋಪ
ಮಂಗಳೂರು: ಕಾರ್ಮಿಕರು ಕ್ರೋಢಿಕರಿಸಿದ ಕೋಟ್ಯಾಂತರ ಹಣ ಸರ್ಕಾರದ ಬೊಕ್ಕಸದಲ್ಲಿದ್ದರೂ ಕಾರ್ಮಿಕರಿಗಾಗಿ ಬಳಕೆ ಮಾಡದೆ ವಂಚಿಸಲಾಗುತ್ತಿದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘ ಆರೋಪಿಸಿದೆ.
ರಾಜ್ಯದಲ್ಲಿ ಶೇ. 75 ಜನ ಕಾರ್ಮಿಕರಿದ್ದು, ಸರ್ಕಾರದಿಂದ ದೊರಯುತ್ತಿರುವ ಸವಲತ್ತುಗಳ ಪಾಲು ಶೇ. 5 ಆಗಿದೆ. ಇದರಲ್ಲಿ ಶೇ. 10 ಅಬಕಾರಿ ಇಲಾಖೆಗೆ ರವಾನೆಯಾಗುತ್ತದೆ ಎಂದು ಸಂಘದ ಅಧ್ಯಕ್ಷ ವಿಜಯ ಹೆಗ್ಡೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ ರು. 150 ನೀಡಿ ಕಾರ್ಮಿಕರನ್ನು ದುಡಿಸಲಾಗುತ್ತಿದೆ. ಸರ್ಕಾರ ಸರಿಯಾದ ವೇತನ ನೀತಿ ಕ್ರಮವನ್ನು ಜಾರಿಗೆ ತರುವ ಕೆಲಸ ಮಾಡಿಲ್ಲ. ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದರು.
ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಕ್ರಾಂತಿ ಆಗಬೇಕಾಗಿರುವುದು ಅನಿವಾರ್ಯ. ಕಾರ್ಮಿಕರ ಹಕ್ಕಿಗಾಗಿ ಸಂಘಟನೆ ರಾಜ್ಯಾಂದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುದತ್ತ್ಜೈನ್ ಮಾತನಾಡಿ, ಕಾರ್ಮಿಕರಿಗೆ ನೀಡಬೇಕಾದ ಸವಲತ್ತುಗಳ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಬೀಡಿ ಕಾರ್ಮಿಕರ ಆಸ್ಪತ್ರೆ ನಿರ್ಮಾಣಕ್ಕಾಗಿ 10ವರ್ಷದ ಹಿಂದೆ ಕಾವೂರಿನಲ್ಲಿ 5ಎಕರೆ ಜಾಗ ನಿಗದಿಪಡಿಸಿದ್ದು, ಇಂದು ಅದು ಮಠದ ಜಾಗವಾಗಿ ಪರಿವರ್ತನೆಗೊಂಡಿದೆ. ಸರ್ಕಾರಿ ಆಸ್ಪತ್ರೆಯಾದ ವೆನ್ಲಾಕ್ನ್ನು ಪಂಪುವೆಲ್ಗೆ ಸ್ಥಳಾಂತರಗೊಳಿಸುವ ಯೋಜನೆ ನಡೆಯುತ್ತಿದೆ ಎಂದರು.
ಮುಂದಿನ ಹೊಸ ಸರ್ಕಾರ ರಚನೆಯಾಗುವ ಸಂದರ್ಭ ಕಾರ್ಮಿಕರ ವಿವಿಧ ಬೇಡಿಕೆಗಳ ಪ್ರಣಾಳಿಕೆಯನ್ನು ಈಡೇರಿಸುವಂತೆ ಹೋರಾಟ ನಡೆಸುವ ಚಿಂತನೆಯಿದೆ ಎಂದರು.