ಬಂಟ್ವಾಳ: ಕೃಷ್ಣಪ್ಪ ಪೂಜಾರಿ ಜೆಡಿಎಸ್ ಅಭ್ಯರ್ಥಿ
ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಜೆಡಿಎಸ್ನ ಸಂಭಾವ್ಯ ಅಭ್ಯರ್ಥಿ ಎನ್ನಲಾಗಿದ್ದ ಸೌಂದರ್ಯ ರಮೇಶ್ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದು, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಲಿದ್ದಾರೆ. ಈ ಬಗ್ಗೆ ಈಗಾಗಲೇ ಪಕ್ಷದಿಂದ ಒಪ್ಪಿಗೆ ಪಡೆದುಕೊಂಡಿರುವ ಕೃಷ್ಣಪ್ಪ ಪೂಜಾರಿ, ಏ.17ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಬೆಳ್ಳಿಪ್ಪಾಡಿ- ಉಳಿಪ್ಪಾಡಿ- ಪೊರ್ಲಿಪ್ಪಾಡಿ ಸ್ಪರ್ಧೆ: ಕೃಷ್ಣಪ್ಪ ಪೂಜಾರಿ ಸ್ಪರ್ಧೆಯಿಂದಾಗಿ ಬೆಳ್ಳಿಪ್ಪಾಡಿ- ಉಳಿಪ್ಪಾಡಿ- ಪೊರ್ಲಿಪ್ಪಾಡಿ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಕಾಂಗ್ರೆಸ್ನಿಂದ ಬೆಳ್ಳಿಪ್ಪಾಡಿ ರಮಾನಾಥ ರೈ, ಬಿಜೆಪಿಯಿಂದ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ಹಾಗೂ ಜೆಡಿಎಸ್ನಿಂದ ಕಲ್ಲಡ್ಕ ಸಮೀಪದ ಪೊರ್ಲಿಪ್ಪಾಡಿಯ ಕೃಷ್ಣಪ್ಪ ಪೂಜಾರಿ ಸ್ಪರ್ಧೆಯಲ್ಲಿದ್ದಾರೆ.
ಕಾಪು: ಜೆಡಿಎಸ್ ಅಭ್ಯರ್ಥಿ ವಾಸುದೇವ ರಾವ್
ಪಡುಬಿದ್ರಿ: ಕಾಪು ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಉಡುಪಿ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ವಾಸುದೇವ ರಾವ್ ಸ್ಪರ್ಧಿಸಲಿದ್ದಾರೆ. ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಅವಿಭಜಿತ ದ.ಕ. ಜಿಲ್ಲಾ ಫೋಟೊಗ್ರಾಫರ್ಸ್ ಸಂಘದ ಅಧ್ಯಕ್ಷ. ಇವರು ಬ್ರಾಹ್ಮಣ ಸಮಾಜಕ್ಕೆ ಸೇರಿದವರಾಗಿದ್ದು, ಕರಾವಳಿ ಜಿಲ್ಲೆಯಲ್ಲಿ ಈ ಸಮಾಜದಿಂದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮತಗಳನ್ನು ಪಡೆಯುತ್ತಿವೆಯೇ ಹೊರತು ಅವರನ್ನು ಗುರುತಿಸಿ ಟಿಕೆಟ್ ನೀಡುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅವರಿಗೆ ಅವಕಾಶ ನೀಡಿರುತ್ತದೆ ಎಂದು ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ವಾಸುದೇವ ರಾವ್ ಮಜೂರು ನಾಗರಿಕ ಸಮಿತಿಯ ಅಧ್ಯಕ್ಷರಾಗಿದ್ದಾರೆ.
--
ಅಂಚೆ ತೆರಪಿನ ಪರೀಕ್ಷೆ ಮುಂದಕ್ಕೆ
ಮಂಗಳೂರು: ಮೇ 5ರ ವಿಧಾನಸಭಾ ಚುನಾವಣೆ, 8ರಂದು ನಡೆಯುವ ಮತಎಣಿಕೆ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪಿನ ಬಿಎ, ಬಿಕಾಂ ಮತ್ತು ಬಿಬಿಎಂ ಕೋರ್ಸ್ಗಳ 2012-13ನೇ ಸಾಲಿನ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಪರೀಕ್ಷೆಗಳು ಮೇ 6ರ ಬದಲು 9ರಂದು ಆರಂಭಗೊಳ್ಳಲಿದೆ. ಉಳಿದ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿವಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 0824-2287824 ಸಂಪರ್ಕಿಸಬಹುದು.