ಬಾವಗೆ ಜೈ: ವಿಜಯ ಕುಮಾರ್ ಶೆಟ್ಟಿ, ಕೃಪಾ ಆಳ್ವಗೆ ಕಾಂಗ್ರೆಸ್ ಕೃಪೆಯಿಲ್ಲ
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರಕ್ಕೆ ಸ್ವತಃ ಪಕ್ಷ ಕಾರ್ಯಕರ್ತರ ವಿರೋಧ ಹೊರತೂ ಯಾರಿಗೆ ಟಿಕೆಟ್ ಎನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಭಾನುವಾರ ಉತ್ತರ ನೀಡಿದೆ. ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕೃಪಾ ಆಳ್ವರನ್ನು ಬದಿಗೆ ಸರಿಸಿ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೊಯ್ದಿನ್ ಬಾವಾಗೆ ಮಣೆ ಹಾಕಲಾಗಿದೆ. ಇದರೊಂದಿಗೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಆದರೆ ಪುತ್ತೂರಿನಲ್ಲಿ ಯಾರಿಗೆ ಟಿಕೆಟ್ ಎನ್ನುವುದನ್ನು ಕಾಯ್ದಿರಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಪುತ್ತೂರಲ್ಲಿ ಯಾರಿಗೆ?: ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ವಿನಯ ಕುಮಾರ್ ಸೊರಕೆ ಇವರಲ್ಲಿ ಒಬ್ಬರಿಗೆ ಟಿಕೆಟ್ ಎಂದು ಅಂತಿಮ ಕ್ಷಣದಲ್ಲಿ ಸುದ್ದಿ ಹಬ್ಬಿದೆ. ಸೊರಕೆ ಸ್ಪರ್ಧೆಗೆ ಆಸಕ್ತಿ ತೋರಿಸುತ್ತಿಲ್ಲ. ಬ್ಲಾಕ್ ಅಧ್ಯಕ್ಷ ಹೇಮನಾಥ ಶೆಟ್ಟಿ ಹೆಸರು ಈಗ ಕೇಳಿಬರುತ್ತಿಲ್ಲ. ಹಾಗಾಗಿ ಕೊನೆ ಕ್ಷಣದಲ್ಲಿ ಶಕುಂತಳಾ ಶೆಟ್ಟಿಗೆ ಟಿಕೆಟ್ ಸಿಕ್ಕಿದರೂ ಸಿಗಬಹುದು. ಅಥವಾ ಜಾತಿ ಲೆಕ್ಕಾಚಾರದಲ್ಲಿ ಗೌಡ ಸಮುದಾಯದ ಭರತ್ ಮುಂಡೋಡಿಗೆ ಟಿಕೆಟ್ ಸಿಕ್ಕಿದರೂ ಅಚ್ಚರಿಪಡಬೇಕಿಲ್ಲ.
ಬೆಂಬಲಿಗರ ಹೊಯ್‌ಕೈ: ಭಾನುವಾರ ಸಂಜೆ ವೇಳೆಗೆ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟವಾದಾಗ, ಮೊಯ್ದಿನ್ ಬಾವಾ ಹೆಸರು ಘೋಷಣೆಯಾಗಿತ್ತು. ಇದು ಕೃಪಾ ಆಳ್ವ, ವಿಜಯ ಕುಮಾರ್ ಶೆಟ್ಟಿಗೆ ಅಚ್ಚರಿ ಜತೆ ಹೊಡೆತ ನೀಡಿತ್ತು. ಸಹಜವಾಗಿಯೇ ಬೆಂಬಲಿಗರು ವಿಜಯ ಕುಮಾರ್ ಶೆಟ್ಟಿ ಮನೆ ಮುಂದೆ ಜಮಾಯಿಸಿದರಲ್ಲದೆ, ಹೊಯ್‌ಕೈ ನಡೆಯಿತು. ಬಳಿಕ, ಮುಂದೇನು ಎಂದು ಪ್ರತಿತಂತ್ರಕ್ಕೆ ನಿರ್ಧರಿಸಿದರು. ಅಷ್ಟರಲ್ಲಿ ರೋಷತಪ್ತ ಬೆಂಬಲಿಗರು ವಿಜಯ ಕುಮಾರ್ ಶೆಟ್ಟಿ ಮನೆಗೆ ಧಾವಿಸುತ್ತಿದ್ದ ಮೊಯ್ದಿನ್ ಬಾವಾರನ್ನು ಅಡ್ಡಗಟ್ಟಿ ವಾಪಾಸ್ ಕಳುಹಿಸಿದರು.
1985 ಮತ್ತು 94ರಲ್ಲಿ ಸುರತ್ಕಲ್ ಕ್ಷೇತ್ರದಲ್ಲಿ ಗೆದ್ದಿದ್ದ ವಿಜಯ ಕುಮಾರ್ ಶೆಟ್ಟಿ, 94 ಹಾಗೂ 2004ರಲ್ಲಿ ಸೋಲುಂಡಿದ್ದರು. 2008ರಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿದ್ದ ಮೊಯ್ದಿನ್ ಬಾವ ಶಾಸಕ ಕೃಷ್ಣಪಾಲೇಮಾರ್ ಎದುರು ಸ್ಪರ್ಧಿಸಿದರೂ 14,426 ಮತ ಅಂತರದಿಂದ ಸೋಲು ಕಂಡಿದ್ದರು.
2ನೇ ಬಾರಿ ಅದೃಷ್ಟ ಪರೀಕ್ಷೆ: ಕೆಲವು ವರ್ಷ ಹಿಂದೆಯಷ್ಟೆ ಕೃಪಾ ಆಳ್ವ ಕಾಂಗ್ರೆಸ್‌ನಲ್ಲಿ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದರು. ಅದಕ್ಕೂ ಮೊದಲು ಮೊಯ್ದಿನ್ ಬಾವ ಸರದಿ. ವಿಜಯ ಕುಮಾರ್ ಶೆಟ್ಟಿ ಮೊದಲಿಂದಲೂ ಕಟ್ಟಾ ಕಾಂಗ್ರೆಸಿಗ. ಕೃಪಾ ಆಳ್ವಗೆ ಟಿಕೆಟ್ ನೀಡುತ್ತಾರೆ ಎಂದು ಸುದ್ದಿಯಾದಾಗ ವಿಜಯ ಕುಮಾರ್ ಶೆಟ್ಟಿ ಬೆಂಬಲಿಗರು ಬಹಿರಂಗ ಪ್ರತಿಭಟನೆಗೆ ಮುಂದಾದರು. ಸುರತ್ಕಲ್ ವ್ಯಾಪ್ತಿಯ 11 ಮಂದಿ ಪಾಲಿಕೆ ಸದಸ್ಯರು ರಾಜಿನಾಮೆ ಬೆದರಿಕೆ ಒಡ್ಡಿದರು. ಈ ಒತ್ತಡಕ್ಕಾದರೂ ವಿಜಯ ಕುಮಾರ್ ಶೆಟ್ಟಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಹೊಂದಿದ್ದರು. ಕೊನೆಗೂ ನಿರೀಕ್ಷೆ ತಲೆಕೆಳಗಾಗಿ ಮೊಯ್ದಿನ್ ಬಾವ 2ನೇ ಬಾರಿ ಅದೃಷ್ಟ ಪರೀಕ್ಷೆ ಒಳಗಾಗಲಿದ್ದಾರೆ.
ವಿಜಯ ಕುಮಾರ್ ಶೆಟ್ಟಿ ತಟಸ್ಥ?: ಭಾನುವಾರ ರಾತ್ರಿ ವೇಳೆಗೆ 500ಕ್ಕೂ ಅಧಿಕ ಮಂದಿ ಬೆಂಬಲಿಗರು ಶೆಟ್ಟಿ ಮನೆಯಲ್ಲಿ ಜಮಾಯಿಸಿ, ಮುಂದಿನ ಕಾರ್ಯತಂತ್ರ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಶೆಟ್ಟಿ ಹೊರತುಪಡಿಸಿ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಮಹಾನಗರ ಪಾಲಿಕೆ ಸದಸ್ಯ ದೀಪಕ್ ಪೂಜಾರಿ, ಕವಿತಾ ಸನಿಲ್, ಪರುಷೋತ್ತಮ ಮತ್ತಿರರ 11 ಮಂದಿ ಪಾಲಿಕೆ ಸದಸ್ಯತ್ವಕ್ಕೆ ಸಾಮೂಹಿಕ ರಾಜಿನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಮತ್ತು ಗುರುಪುರ ಬ್ಲಾಕ್‌ನಲ್ಲಿ ಶೆಟ್ಟಿಯವರ ಹೆಸರು ಶಿಫಾರಸ್ಸು, 3 ಬಾರಿ ವೀಕ್ಷಕರ ಅನುಮೋದನೆ ಆಗಿದ್ದರೂ ಕೊನೆ ಕ್ಷಣದಲ್ಲಿ ಟಿಕೆಟ್ ಮೊಯ್ದಿನ್ ಬಾವ ಪಾಲಾದದ್ದು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.