ಬೆಳ್ತಂಗಡಿಗೆ ರಂಜನ್, ಮೂಡುಬಿದಿರೆಗೆ ಕೋಟ್ಯಾನ್
ಮಂಗಳೂರು: ವಿಧಾನಸಭಾ ಚುನಾವಣೆಗೆ ಕೊನೆಗೂ ಬಿಜೆಪಿ ಅಭ್ಯರ್ಥಿಗಳ ಮೂರನೇ ಹಂತದ ಪಟ್ಟಿ ಭಾನುವಾರ ರಾತ್ರಿ ಬಿಡುಗಡೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ ಕಳೆದ ಬಾರಿ ಬಿಜೆಪಿ ಸೇರಿದ್ದ ರಂಜನ್ ಗೌಡ ಹಾಗೂ ಮೂಡುಬಿದಿರೆಯಿಂದ ಸ್ಪರ್ಧಿಸಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೆಸರನ್ನು ಪಕ್ಷ ಭಾನುವಾರ ರಾತ್ರಿ ಪ್ರಕಟಿಸಿದೆ. ಮೂಡುಬಿದಿರೆಗೆ ಸಂಸದ ನಳಿನ್ ಕುಮಾರ್ ಕಟೀಲು, ಹಿಂ.ಜಾ.ವೇ. ಮುಖಂಡ ಸತ್ಯಜಿತ್ ಸುರತ್ಕಲ್ ಹೆಸರು ಕೇಳಿಬಂದಿತ್ತು. ಬೆಳ್ತಂಗಡಿಗೆ ಮಾಜಿ ಸಚಿವ ಗಂಗಾಧರ ಗೌಡ, ಬಿಜೆಪಿ ಜಿಲ್ಲಾ ಪ್ರಭಾರಿ ಪ್ರತಾಪ ಸಿಂಹ ನಾಯಕ್ ಹೆಸರು ಕೇಳಿಬಂದಿತ್ತು. ಕೊನೆಕ್ಷಣದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ತಿಣುಕಾಡಿದ ಮುಖಂಡರು ಬೆಳ್ತಂಗಡಿಯಲ್ಲಿ ಹೊಸತಾಗಿ ಬಿಜೆಪಿ ಅಭ್ಯರ್ಥಿಗೆ ಮಣೆ ಹಾಕಿದ್ದು ಬೆಳ್ತಂಗಡಿಯಲ್ಲಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.