ಸ್ವಂತ ವೆಬ್ಸೈಟ್ ರಚಿಸಿ ಶಾಸಕ ಭಟ್ ಪ್ರಚಾರ
- ಆತ್ಮಭೂಷಣ್
ಮಂಗಳೂರು: ಚುನಾವಣೆ ವೇಳೆ ಹೊಸದಾಗಿ ಸ್ಪರ್ಧಿಸುವವರು ವೆಬ್ಸೈಟ್ ರಚಿಸಿ ಪ್ರಚಾರಕ್ಕೆ ಹೈಟೆಕ್ ಸ್ಪರ್ಶ ನೀಡುವುದು ಮಾಮೂಲು. ಕಳೆದ ಲೋಕಸಭಾ ಚುನಾವಣೆಯಲ್ಲಿ ಹೈಟೆಕ್ ಪ್ರಚಾರಕ್ಕೆ ಮೊರೆ ಹೋದ ಬಿಜೆಪಿ ತನ್ನ ಸಂಸದರ ವೆಬ್ಸೈಟ್ ರೂಪಿಸಿತ್ತು. ಆಗ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದರೂ ಆಗಿದ್ದ ಡಿ.ವಿ.ಸದಾನಂದ ಗೌಡ ತನ್ನದೇ ಹೆಸರಿನ ವೆಬ್ಸೈಟ್ ರಚಿಸಿದ್ದರು.
ಈ ಬಾರಿ ವೆಬ್ಸೈಟ್ ತೆರೆಯುವ ಸರದಿ ಶಾಸಕರದ್ದು. ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯ ಶಾಸಕ, ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಸ್ವಂತ ವೆಬ್ಸೈಟ್ ರಚಿಸಿಕೊಂಡಿದ್ದಾರೆ. ಅಲ್ಲದೆ ಫೇಸ್ಬುಕ್, ಟ್ವೀಟ್ ಖಾತೆಯನ್ನೂ ತೆರೆದಿದ್ದಾರೆ. ಈ ಮೂಲಕ ಮತದಾರರ ಬಳಿಗೆ ಹೈಟೆಕ್ ತಂತ್ರಜ್ಞಾನದಲ್ಲಿ ತೆರಳುತ್ತಿದ್ದಾರೆ.
ಈ ವೆಬ್ಸೈಟ್ನಲ್ಲಿ ಏನೇನಿದೆ?: ಈ ವೆಬ್ಸೈಟ್ನಲ್ಲಿ ಯೋಗೀಶ್ ಭಟ್ರ ಸಮಗ್ರ ಪರಿಚಯ, ಅವರ ಸಾಧನೆ, ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು, ಭವಿಷ್ಯದ ಯೋಜನೆ, ಫೋಟೋ ಗ್ಯಾಲರಿಗಳಿವೆ. ಇವೆಲ್ಲ ಈಗಷ್ಟೇ ಅಪ್ಲೋಡ್ ಆಗುತ್ತಿದೆ. ಕಾಮಗಾರಿ ವಿವರ, ಫೋಟೋಗಳು ಇದರಲ್ಲಿವೆ. ಯೋಗೀಶ್ ಭಟ್ರಲ್ಲಿ ಮಾತನಾಡಬೇಕಾದರೆ ಅದಕ್ಕೂ ಗೂಗಲ್ ಟಾಕ್ನಂತೆ ಅವಕಾಶ ಕಲ್ಪಿಸಲಾಗಿದೆ. ಅಭಿಪ್ರಾಯ ತಿಳಿಸಲೂ ಆಸ್ಪದವಿದೆ.
'ಎನ್ ಯೋಗೀಶ್ ಭಟ್ ಡಾಟ್ ಕಾಂ' ವೆಬ್ಸೈಟ್ನಲ್ಲಿ ಯೋಗೀಶ್ ಭಟ್ರ ಎಲ್ಲ ವಿವರಗಳೂ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಲಭ್ಯವಾಗುವಂತೆ ರೂಪಿಸಲಾಗಿದೆ. ಇದನ್ನು ಯೋಗೀಶ್ ಭಟ್ಟರ ಮಿತ್ರ ಸುನೀಲ್ ಕುಲಕರ್ಣಿ ವಿನ್ಯಾಸಗೊಳಿಸಿದ್ದಾರೆ.
'ನಮ್ಮ ಯೋಗೀಶ್ ಭಟ್'...: 'ನಮ್ಮ ಯೋಗೀಶ್ ಭಟ್' ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ. ಅದರಲ್ಲಿ ಯೋಗೀಶ್ ಭಟ್ ಅಭ್ಯರ್ಥಿ, ಸಾಧನೆಗಳನ್ನು ಮೆಲುಕು ಹಾಕಲಾಗಿದೆ. ಯೋಗೀಶ್ ಭಟ್ರ ಸಾಧನೆಗಳ ಪೋಸ್ಟರ್ಗಳು ಇನ್ನಷ್ಟೆ ಕಾಣಿಸಬೇಕು.
ಇದಲ್ಲದೆ ಟ್ವೀಟರ್ನಲ್ಲೂ ಯೋಗೀಶ್ ಭಟ್ರಿದ್ದಾರೆ. ಇದಾವುದನ್ನೂ ಯೋಗೀಶ್ ಭಟ್ ಸ್ವತಃ ನಿರ್ವಹಿಸುತ್ತಿಲ್ಲವಂತೆ. ಅವರ ಮಿತ್ರರೊಬ್ಬರು ಇವರ ಸಲಹೆ ಪಡೆದೇ ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಾರೆ ಎನ್ನುತ್ತಾರೆ ಯೋಗೀಶ್ ಭಟ್.
ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಸಮಗ್ರ ವಿವರವುಳ್ಳ ಬಿಜೆಪಿ ಕರ್ನಾಟಕ ವೆಬ್ಸೈಟ್ ಇದೆ. ಜಿಲ್ಲೆಯಲ್ಲಿ 4 ಮಂದಿ ಬಿಜೆಪಿ ಶಾಸಕರಿದ್ದಾರೆ. ವೆಬ್ಸೈಟ್ ತಂತ್ರಜ್ಞಾನ ಮೊರೆಹೋದ್ದು ಯೋಗೀಶ್ ಭಟ್ ಮಾತ್ರ. ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯೋಗೀಶ್ ಭಟ್ಗೆ ಇದು ಎಷ್ಟರ ಮಟ್ಟಿಗೆ ಪ್ರಯೋಜನ ಎನ್ನುವುದು ನೋಡಬೇಕು.