ಇಂಗ್ಲಿಷ್ ಗೈಡ್‌ಗಳ ಕುತಂತ್ರ ತನಿಖೆಗೆ ವಿವಿ ಸಮಿತಿ ನೇಮಕ
ಕ.ಪ್ರ. ವಾರ್ತೆ ಮಂಗಳೂರು ಏ.15
ಇಂಗ್ಲಿಷ್ ಪಿಎಚ್‌ಡಿ ವಿಭಾಗದ ಗೈಡ್‌ಗಳು ಹೆಚ್ಚಿನ ಸಂಖ್ಯೆಯಲ್ಲಋ ವಿದ್ಯಾರ್ಥಿಗಳು ಸಂಶೋಧನೆಗೆ ಬಾರದೆ ಇರಲು ಹೂಡುವ ತಂತ್ರಗಳ ಬಗ್ಗೆ ತನಿಖೆ ನಡೆಸಲು ಮಂಗಳೂರು ವಿವಿ ಸಿಂಡಿಕೇಟ್ ಮಂಡಳಿ ಸೋಮವಾರ ನಿರ್ಣಯ ಕೈಗೊಂಡಿದೆ. ಫೆ.8 ರಂದು ಕನ್ನಡಪ್ರಭದಲ್ಲಿ 'ಮಂಗಳೂರು ವಿವಿ ಪಿಎಚ್‌ಡಿ: ಅಂಕೆ ಮೀರಿದ ಪ್ರೊಫೆಸರ್‌ಗಳ ಫೇಲ್ ತಂತ್ರ' ಎಂಬ ಶಿರ್ಷಿಕೆಯಡಿಯಲ್ಲಿ ವಿಶೇಷ ವರದಿಯೊಂದು ಪ್ರಕಟವಾಗಿತ್ತು. ಬಳಿಕ ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು.
ಏ.10ರಂದು ಮಡಿಕೇರಿಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಪಿಎಚ್‌ಡಿ ವಿಷಯ ಮಂಡನೆಯಾಗಿತ್ತು. ಸತತ ರಜೆ ಹಿನ್ನೆಲೆಯಲ್ಲಿ ಸೋಮವಾರ ಸಿಂಡಿಕೇಟ್ ಸಭೆ ಪ್ರೊಸಿಡಿಂಗ್ಸ್ ಆರಂಭವಾಗಿದೆ. ಸೋಮವಾರ ವಿವಿ ಕುಲಪತಿ ಡಾ.ಟಿ.ಸಿ. ಶಿವಶಂಕರಮೂರ್ತಿ ಕಡತಕ್ಕೆ ಸಹಿ ಹಾಕಿದ್ದಾರೆ. ಇನ್ನು ನೋಟಿಫಿಕೇಷನ್ ಆಗಿ ಇಂಗ್ಲಿಷ್ ಪಿಎಚ್‌ಡಿ ಬಗ್ಗೆ ಸಮಗ್ರ ತನಿಖೆ ಆರಂಭವಾಗಲಿದೆ.
ಸಮಿತಿಯಲ್ಲಿ ವಿಜಯಕುಮಾರ್, ಹಂಪಾ ನಾಗರಾಜಯ್ಯ, ಶ್ರೀಪತಿ ತಂತ್ರಿ ಮತ್ತು ಬೇರೆ ವಿವಿಯಿಂದ ಒಬ್ಬರು ವಿಷಯ ಪರಿಣಿತರು ಇರಲಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ವಿವಿ, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸಮಗ್ರ ತನಿಖೆ ನಡೆಸಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
5 ವರ್ಷಗಳಲ್ಲಿ ಪಿಎಚ್‌ಡಿ ನೋಂದಣಿ ಆಗಿರುವುದು, ಮಧ್ಯದಲ್ಲಿ ಬಿಟ್ಟು ಹೋಗಿರುವುದು, ಇದರ ಜತೆಯಲ್ಲಿ 5 ವರ್ಷಗಳಲ್ಲಿ ಇಂಗ್ಲಿಷ್ ಎಂಎ ಪರೀಕ್ಷೆ ಬರೆದವರು, ತೇರ್ಗಡೆ ಆದವರು, ಅದರಲ್ಲಿ ಶೇ.55ಕ್ಕಿಂತ ಕಡಿಮೆ ಬಂದ ಸಮಗ್ರ ವಿವರ ಕ್ರೋಡೀಕರಿಸಿ ತನಿಖೆ ನಡೆಯಲಿದೆ.