ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪತ್ತೆ
ಉಪ್ಪಿನಂಗಡಿ: ಮರ್ದಾಳದಿಂದ ನಾಲ್ಕು ದಿನಗಳ ಹಿಂದೆ ಪರಾರಿಯಾಗಿದ್ದ ಹಾಗೂ ಅಪಹರಣಕ್ಕೆ ಒಳಗಾಗಿದ್ದಾಳೆಂದು ದೂರಲಾಗಿದ್ದ ಯುವತಿ ವಿವಾಹಿತ ಯುವಕನೊಂದಿಗೆ ಮೂಡಿಗೆರೆಯಲ್ಲಿ ಸೋಮವಾರ ಪತ್ತೆಯಾಗಿದ್ದಾರೆ. ಬಂಟ್ರ ಗ್ರಾಮದ ಪಟ್ಟೆ ಮನೆ ನಿವಾಸಿ ಶೇಖ್ ಕರೀಂ ಎಂಬವರ ಪುತ್ರಿ ರುಬೀನಾ (19) ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಯುವತಿಯ ತಂದೆ ಶೇಖ್ ಕರೀಂ ನನ್ನ ಮಗಳನ್ನು ಮುಂಡ್ರಾಡಿ ನಿವಾಸಿ ನಝೀರ್ ಎಂಬವರು ಅಪಹರಿಸಿದ್ದಾರೆ ಎಂದು ಕಡಬ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಿಸಿದಾಗ ನಝೀರ್ ಕಣ್ಮರೆಯಾದ ವಿಚಾರ ಬೆಳಕಿಗೆ ಬಂದಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಅಂತೆಯೇ ಸೋಮವಾರ ಮೂಡಿಗೆರೆಯಲ್ಲಿ ಲಾಡ್ಜ್‌ವೊಂದರಲ್ಲಿ ಪತ್ತೆಯಾಗಿದ್ದು, ಪೊಲೀಸರು ಅವರನ್ನು ಠಾಣೆಗೆ ಕರೆ ತಂದಿದ್ದಾರೆ. ನಝೀರ್‌ಗೆ ಈಗಾಗಲೇ ಮದುವೆಯಾಗಿ, ಮೂವರು ಮಕ್ಕಳಿದ್ದಾರೆ. ರುಬೀನಾಗೂ ಮದುವೆ ನಿಶ್ಚಿತಾರ್ಥವಾಗಿದ್ದು, ಪ್ರಿತಿಸಿದ ವ್ಯಕ್ತಿಯೊಂದಿಗೆ ಮದುವೆಯಾಗುವುದಾಗಿ ಇಚ್ಚೆ ವ್ಯಕ್ತಪಡಿಸಿದ್ದಾಳೆ ಎನ್ನಲಾಗಿದೆ.
ಯವಕರಿಬ್ಬರ ಕೊಲೆಗೆ ಯತ್ನ
ಬೆಳ್ತಂಗಡಿ: ಓಡಿಲ್ನಾಳ ಗ್ರಾಮದಲ್ಲಿ ರಾತ್ರಿ ಮನೆಗೆ ನುಗ್ಗಿದ ತಂಡವೊಂದು ಯುವಕರಿಬ್ಬರನ್ನು ಎಳೆದೊಯ್ದು ಕೊಲೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ವಾಸುದೇವ ರಾವ್ ಅವರ ಮಕ್ಕಳಾದ ಅಮೃತೇಶ ಹಾಗೂ ರಾಘವೇಂದ್ರ ಅವರನ್ನು ಮನೆಯೊಳಗೆ ನುಗ್ಗಿ ತೋಟಕ್ಕೆ ಎಳೆದೊಯ್ದು ತಂಡ ತಲವಾರು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದೆ ಎಂದು ದೂರಲಾಗಿದ್ದು, ಗಾಯಾಳುಗಳು ಗುರುವಾಯನಕೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ವಾಸುದೇವ ರಾವ್ ಹಾಗೂ ಅಣ್ಣು ನಾಯ್ಕ ಅವರಿಗೆ ಜಾಗದ ತಕರಾರು ಇದ್ದು, ಇದು ನ್ಯಾಯಾಲಯದಲ್ಲಿದೆ. ಇದೇ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ಹಲ್ಲೆ
ಬೆಳ್ತಂಗಡಿ: ಮುಂಡಾಜೆ ಗ್ರಾಮದ ದೇವಿಗುಡಿ ಕೂಳೂರಿನಲ್ಲಿ ಪ್ರವೀಣ್ ಡಿ. ಅವರ ಪತ್ನಿ ಸಬಿತಾ ಯಾನೆ ಸರಿತಾ ಅವರಿಗೆ ನೆರೆಮನೆಯ ಸತೀಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸತೀಶ್‌ನ ಪತ್ನಿ ತವರಿಗೆ ಹೋಗಿದ್ದು, ಇದಕ್ಕೆ ಪ್ರವೀಣ್ ದಂಪತಿಯೇ ಕಾರಣ ಎಂಬ ತಪ್ಪು ತಿಳುವಳಿಕೆಯಿಂದ ಸತೀಶ್ ಎಂಬಾತ ಪ್ರವೀಣ್ ಮನೆಯೊಳಗೆ ನುಗ್ಗಿ ಸರಿತಾರಿಗೆ ಹಲ್ಲೆ ಮಾಡಿದ್ದಾನೆ. ಗಾಯಾಳು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.