ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಪೆರ್ನೆ ದುರಂತ ಚಿತ್ರೀಕರಣ ದುರುದ್ದೇಶದಿಂದ ಮಾಡಿಲ್ಲ'

Vishwanath S
Updated On : 16 Apr 2013, 2:04 am

ಕ.ಪ್ರ. ವಾರ್ತೆ , ಉಪ್ಪಿನಂಗಡಿ , ಏ.15
ಕಳೆದ ಮಂಗಳವಾರ ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಅಪಘಾತಕ್ಕೀಡಾಗಿ ಹತ್ತು ಮಂದಿ ಮೃತಪಟ್ಟ  ಘಟನೆಯಲ್ಲಿ ಜೀವಂತ ಬೆಂದು ಸಹಾಯಕ್ಕಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಸಂತನ ಸಾವಿನ ದಾರುಣ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಿದ್ದು ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ.
 ವಸಂತನ ದಾರುಣ ಸ್ಥಿತಿಯನ್ನು ಚಿತ್ರೀಕರಿಸುವ ಉದ್ದೇಶ ನನಗಿರಲಿಲ್ಲ. ಟ್ಯಾಂಕರ್ ಹೊತ್ತಿ ಉರಿಯುತ್ತಿದ್ದ ದೃಶ್ಯವನ್ನು ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ನಿಂತು ಸೆರೆ ಹಿಡಿಯುತ್ತಿದ್ದಾಗ ಘಟನಾ ಸ್ಥಳದಿಂದ ಏಕಾಏಕಿ ಎದ್ದು ಬಂದ ವಸಂತ ಅವರ ಹೃದಯವಿದ್ರಾವಕ ಸ್ಥಿತಿ ಚಿತ್ರೀಕರಣದಲ್ಲಿ ಸೇರಿತ್ತೇ ವಿನಾ ಅವರ ಸ್ಥಿತಿಯನ್ನು ಸೆರೆ ಹಿಡಿಯಲೆಂದೇ ಚಿತ್ರೀಕರಿಸಿದ್ದಲ್ಲ ಎಂದು ಆತ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾನೆ.
ಈತ ಪೆರ್ನೆಯ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾನೆ. 'ನಾನು ಯಾವುದೇ ತಪ್ಪು ಮಾಡಿಲ್ಲ. ಮಾನವ ಸಹಜ ಕುತೂಹಲದಿಂದ ನಾನು ಅಗ್ನಿಸ್ಪರ್ಶಗೊಂಡ ಟ್ಯಾಂಕರ್ ಹೊತ್ತಿ ಉರಿಯುತ್ತಿದ್ದ ದೃಶ್ಯವನ್ನು ನನ್ನ ಮೊಬೈಲ್‌ನಿಂದ ಸೆರೆ ಹಿಡಿಯುತ್ತಿದ್ದೆ. ಆ ಸಂದರ್ಭ ನಾನೂ ಸೇರಿದಂತೆ ಯಾರಿಗೂ ಬೇರೇನೂ ಮಾಡುವಂತಿರಲಿಲ್ಲ. ಟ್ಯಾಂಕರ್ ಸ್ಫೋಟದ ಭೀತಿಯ ನಡುವೆಯೂ ನಾನು ದೃಶ್ಯವನ್ನು ಸೆರೆ ಹಿಡಿಯುತಿದ್ದಂತೆಯೇ ಬೆಂಕಿ ಹಾಗೂ ಹೊಗೆ ವ್ಯಾಪ್ತಿಸಿದ ಸ್ಥಳದಿಂದ ವ್ಯಕ್ತಿಯೊಬ್ಬ ಎದ್ದು ಬರುತ್ತಿರುವಂತೆ ಕಂಡು ಬಂತು. ಸಹಜ ಕುತೂಹಲದಿಂದ ಆ ದೃಶ್ಯವನ್ನು ನಾನು ಸೆರೆ ಹಿಡಿದೆ. ಮೈಯೆಲ್ಲ ಸುಟ್ಟ ಸ್ಥಿತಿಯಲ್ಲಿ ಎದ್ದು ಬಂದ ಅವರನ್ನು ನೀರು ಕೊಟ್ಟು ಸಹಕರಿಸೋಣವೆಂದರೆ ಯಾರೋ ಈ ಸ್ಥಿತಿಯಲ್ಲಿ ನೀರು ಕೊಟ್ಟರೆ ಪ್ರಾಣ ಹೋಗುತ್ತೆ ಎಂದರು.
ಸಾವಿನ ನಡುವೆಯೂ ಅನ್ಯರ ಹಿತ ಕಾಯ್ದ ವಸಂತ
ಮೈಯೆಲ್ಲಾ ಸುಟ್ಟ ಗಾಯವಾದರೂ ಭೀತಿ ಮೂಡುವಂತೆ ಎದ್ದು ಬಂದ ವಸಂತ ಸಾವಿನ ದವಡೆಯಲ್ಲೂ ಅನ್ಯರ ಹಿತಕ್ಕಾಗಿ ಹಾತೊರೆದಿದ್ದರು. ಘಟನೆ ವೇಳೆ ಅಲ್ಲಿದ್ದ ಜನರಲ್ಲಿ 'ದಯವಿಟ್ಟು ನನ್ನ ಕಾರಿನ ಬಳಿ ಹೋಗಬೇಡಿ. ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಇದೆ. ಅದು ಸ್ಫೋಟಗೊಂಡರೆ ನಿಮಗೂ ತೊಂದರೆಯಾದೀತು. ದಯವಿಟ್ಟು ದೂರ ಹೋಗಿ' ಎಂದು ವಿನಂತಿಸಿದ್ದ ಎಂಬುದಾಗಿ ಈ ದೃಶ್ಯವನ್ನು ಚಿತ್ರೀಕರಿಸಿದ್ದ ವಿದ್ಯಾರ್ಥಿ ತಿಳಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement