ಬಂಟ್ವಾಳ: ಪಕ್ಷೇತರ ಅಭ್ಯರ್ಥಿಯಾಗಿ ಎಂ.ಕೆ. ಮೂಸಾ ನಾಮಪತ್ರ
ಬಂಟ್ವಾಳ: ಇಲ್ಲಿನ ವಿಧಾನಸಭಾ ಚುನಾವಣೆಗೆ ವಿಟ್ಲ ಒಕ್ಕೆತ್ತೂರು ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಎಂ.ಕೆ. ಮೂಸಾ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಇವರು, 5 ಬಾರಿ ವಿಟ್ಲ ಗ್ರಾ.ಪಂ. ಸದಸ್ಯರಾಗಿ, 2003 ರಿಂದ 2005 ರ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಇವರ ನಿವಾಸ ಪುತ್ತೂರು ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದರೂ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ರೈ ಗೆ ಬಂಡಾಯ..: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ರಮಾನಾಥ ರೈಯವರು ತನ್ನನ್ನು ಕಡೆಗಣಿಸಿದ್ದಾರೆ. ಜಿಲ್ಲಾಪಂಚಾಯಿತಿ ಸದಸ್ಯರೊಬ್ಬರ ಮಾತು ಕೇಳಿಕೊಂಡು ತಾನು ಮತ್ತು ತನ್ನ ಸಮದಾಯದವರನ್ನು ನಿರ್ಲಕ್ಷ್ಯಭಾವನೆಯಿಮದ ನೋಡುತ್ತಿದ್ದು, ಇದನ್ನು ಪ್ರತಿಭಟಿಸಿ ತಾನು ರೈ ವಿರುದ್ಧ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಮೂಸಾ ಪತ್ರಿಕೆಗೆ ತಿಳಿಸಿದ್ದಾರೆ.
ಕೆಜೆಪಿಗೆ ಕೇವಲ 600 ಮತ!
ಮಂಗಳೂರು: ಉತ್ತರ ವಿಧಾನಸೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೃಷ್ಣ ಜೆ.ಪಾಲೆಮಾರ್, ಉತ್ತರ ಕ್ಷೇತ್ರದಲ್ಲಿ 10 ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಬರುವೆ. ಜನ ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆ. ನಮಗೆ ಸ್ಪರ್ಧೆ ಕಾಂಗ್ರೆಸ್ ಮಾತ್ರ, ಕೆಜೆಪಿ ಸ್ಪರ್ಧಿಯಿಂದ ಯಾವುದೇ ಭಯ ಇಲ್ಲ. ಆ ಪಕ್ಷದ ಹೆಚ್ಚೆಂದರೆ 500, 600 ಮತ ಪಡೆಯಬಹುದು ಎಂದರು.
ಗೆಲವಿಗೆ ಪ್ರಾರ್ಥನೆ
ಮಂಗಳೂರು: ನಾಮ ಪತ್ರ ಸಲ್ಲಿಕೆಗೆ ಮುನ್ನು ಜೆ.ಆರ್.ಲೋಬೋ ಬಿಷಪ್ ಹೌಸ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅಲೋಶಿಯಸ್ ಪಾವ್ಲ್ ಡಿಸೋಜ ಸಹಿತಿ ಧರ್ಮಗುರುಗಳು ಕಾಂಗ್ರೆಸ್ ಅಭ್ಯರ್ಥಿ ಲೋಬೋ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಅರ್ಚಕರಿಂದ ಗೆಲವಿನ ಆಶೀರ್ವಾದ ಪಡೆದರು. ಬಿಜೆಪಿ ಅಭ್ಯರ್ಥಿ ಎನ್.ಯೋಗೀಶ್ ಭಟ್ ಮತ್ತು ಉತ್ತರ ಅಭ್ಯರ್ಥಿ ಕೃಷ್ಣ ಜೆ.ಪಾಲೆಮಾರ್ ಕೂಡಾ ಕುದ್ರೋಳಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಪಾದಯಾತ್ರೆ
ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಮತ್ತು ಬಿಜೆಪಿ ಅಭ್ಯರ್ಥಿ ಎನ್.ಯೋಗೀಶ್ ಭಟ್ ನಾಮಪತ್ರ ಸಲ್ಲಿಕೆಗೆ ಮುನ್ನ ನಗರದಲ್ಲಿ ಪಾದಯಾತ್ರೆ ನಡೆಸಿದರು. ಮಹಾನಗರ ಪಾಲಿಕೆ ವರೆಗೆ ಬ್ಯಾಂಡ್, ವಾದ್ಯ ಸಹಿತವಾಗಿ ತೆರಳಿದರು.