ಯುವತಿ ಆತ್ಮಹತ್ಯೆ
ಸುಳ್ಯ: ಬಾಳಿಲ ಗ್ರಾಮದ ಮರಂಗಲ ಮನೆ ನಿವಾಸಿ ಮೋನಪ್ಪ ಎಂಬವರ ಪುತ್ರಿ ಚಂದ್ರಕಲಾ (20) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ತಂದೆ ಹಾಗೂ ತಾಯಿ ಕೆಲಸಕ್ಕೆ ಹೋಗಿದ್ದ ಸಮಯ ಮನೆಯಲ್ಲಿ ಒಬ್ಬಳೆ ಇದ್ದ ಚಂದ್ರಕಲಾ ವಿಷ ಸೇವಿಸಿದ್ದರು. ಈ ವಿಷಯ ತಿಳಿದು ಸಮೀಪದ ಮನೆಯವರು ಹಾಗೂ ಇತರರು ಬಂದು ಆಕೆಯನ್ನು ಕಾಣಿಯೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಪುತ್ತೂರಿಗೆ ಕರೆದೊಯ್ದರಾದರೂ ಫಲಕಾರಿಯಾಗದೆ ಮಧ್ಯಾಹ್ನದ ವೇಳೆಗೆ ಆಕೆ ಕೊನೆಯುಸಿರೆಳೆದಳು. ಈ ಬಗ್ಗೆ ಆಕೆಯ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಂದ್ರಕಲಾ ಅವರು ಕೆಲವು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಆಕೆ ವಿಷ ಸೇವಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆ. ಗಣಪತಿ ರಾವ್ ನಿಧನ
ಮೂಲ್ಕಿ: ಮೂಲ್ಕಿಯ ಕೆನರಾ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಕೆ. ಗಣಪತಿ ರಾವ್ (77) ಹೃದಯಾಘಾತದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿಯನ್ನು ಅಗಲಿದ್ದಾರೆ.