19ರಂದು ಲೋಕಾ ಕಚೇರಿ ಉದ್ಘಾಟನೆ
ಮಂಗಳೂರು: ರಾಜ್ಯದ ಲೋಕಾಯುಕ್ತ ಡಾ.ವೈ.ಭಾಸ್ಕರ ರಾವ್ ಮತ್ತು ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ಏ.17ರಂದು ಮಂಗಳೂರಿಗೆ ಆಗಮಿಸುವರು. 18ರಂದು ಮಂಗಳೂರಿನಲ್ಲಿ ವಾಸ್ತವ್ಯ. 19ರಂದು ಮಧ್ಯಾಹ್ನ 12.45ಕ್ಕೆ ಉರ್ವಾಸ್ಟೋರ್ನಲ್ಲಿ ನೂತನವಾಗಿ ನಿರ್ಮಿಸಲಾದ ಲೋಕಾಯುಕ್ತ ಕಚೇರಿ ಉದ್ಘಾಟನೆ ನೆರವೇರಿಸಿ ಸುದ್ದಿಗೋಷ್ಠಿ ನಡೆಸುವರು. ಮರುದಿನ ಸಂಜೆ ಬೆಂಗಳೂರಿಗೆ ನಿರ್ಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಆಂಗ್ಲ ಎಂಎ: ಲತಾಗೆ ದ್ವಿತೀಯ ರ್ಯಾಂಕ್
ಬಂಟ್ವಾಳ: ಇಲ್ಲಿನ ವಿದ್ಯಾಗಿರಿಯ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಂಗ್ಲ ಭಾಷಾ ಶಿಕ್ಷಕಿ ಲತಾ ಮಹಾಬಲ ಶೆಟ್ಟಿ (ಲತಾ ಮೋಹನ್ ಶೆಟ್ಟಿ) ಇವರು ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯ ನಡೆಸಿದ ಎಂ.ಎ. ಇಂಗ್ಲಿಷ್ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಗಳಿಸಿದ್ದಾರೆ. ಇವರು ಮೋಹನ್ ಶೆಟ್ಟಿ ಪತ್ನಿ ಹಾಗೂ ಮಹಾಬಲ ಶೆಟ್ಟಿ -ಯಶೋಧ ಶೆಟ್ಟಿ ದಂಪತಿ ಪುತ್ರಿ.
ವಕ್ಫ್ ನಿರ್ದೇಶಕರಾಗಿ ಅಬ್ದುಲ್ ರಹಿಮಾನ್
ಸುಳ್ಯ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ನಿರ್ದೇಶಕರಾಗಿ ಅಬ್ದುಲ್ ರಹಿಮಾನ್ ಮೊಗರ್ಪಣೆ ಆಯ್ಕೆಯಾಗಿದ್ದಾರೆ. ಇವರನ್ನು ರಾಜ್ಯ ಸಮಿತಿ ಅಧ್ಯಕ್ಷ ರಿಯಾಝ್ ಖಾನ್ ನೇಮಕ ಮಾಡಿದ್ದಾರೆ. ಇವರು ಪ್ರಸ್ತುತ ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ನಿರ್ದೇಶಕರಾಗಿ, ತಂಬಿನಮಕ್ಕಿ ದಾರುಲ್ಹುದಾ ಎಜುಕೇಶನ್ ಸೆಂಟರ್ ನಿರ್ದೇಶಕರಾಗಿ, ಮೊಗರ್ಪಣೆ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಸದಸ್ಯರಾಗಿ, ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಶನ್ ಕೌನ್ಸಿಲರಾಗಿ, ಅಲ್ಲದೇ ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಮತದಾನಕ್ಕಾಗಿ ಮೆರವಣಿಗೆ
ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಮೂರು ಇಲಾಖೆಗಳ ಸಿಬ್ಬಂದಿ ವರ್ಗದವರಿಂದ ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ರತ್ನಾಕರ್ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ವಾರ್ತಾ ಇಲಾಖೆ ಮತ್ತು ಆರೋಗ್ಯ ಇಲಾಖಾ ಕಚೇರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ 'ಮತದಾನ ನಮ್ಮ ಹಕ್ಕು, ಎಲ್ಲರೂ ಮತದಾನ ಮಾಡಿ, ನಿಮ್ಮ ಮತ ದೇಶಕ್ಕೆ ಹಿತ' ಎಂಬ ಘೋಷಣೆಯೊಂದಿಗೆ ಜಾಥಾ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ನಾಗರಿಕರಿಗೆ ಮತದಾನದ ಹಕ್ಕಿನ ಬಗ್ಗೆ ತಿಳಿಸಲಾಯಿತು.
ಪೆರ್ನೆ ದುರಂತ: ವಿಹಿಂಪ, ಬಜರಂಗ ದಳ ಸಹಾಯಹಸ್ತ
ಉಪ್ಪಿನಂಗಡಿ: ವಾರದ ಹಿಂದೆ ಸಂಭವಿಸಿದ ಭೀಕರ ಅಡುಗೆ ಅನಿಲ ಟ್ಯಾಂಕರ್ ಅಪಘಾತದಲ್ಲಿ ಉಂಟಾದ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದ, ನಿರ್ಗತಿಕರಾದ ಸಂತ್ರಸ್ತರಿಗೆ ಮಾನವೀಯ ನೆಲೆಯ ಸಹಕಾರ ನೀಡುವ ಸಲುವಾಗಿ ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಸಂಘಟನೆಗಳು ಗುರುಪುರ ವಜ್ರದೇಹಿ ಮಠಾಧೀಶರ ಮುಂದಾಳತ್ವದಲ್ಲಿ ಮಂಗಳವಾರದಂದು ಧನ ಸಹಾಯವನ್ನಿತ್ತು ಪುನರ್ವಸತಿಗೆ ಸರ್ವ ಸಹಕಾರ ನೀಡುವ ಭರವಸೆಯನ್ನು ನೀಡಿತು. ವಿಹಿಂಪ ಮುಂದಾಳು ರಾಧಾಕೃಷ್ಣ ಭಟ್, ಬಜರಂಗ ದಳದ ಮುಂದಾಳು ದಿನೇಶ್ ಜೈನ್, ಸುಪ್ರೀತ್ ರೈ ಅವರು ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಜೊತೆಗೂಡಿ ಆಗಮಿಸಿ ಘಟನೆಯ ಬಳಿಕದ ದೃಶ್ಯ ಕಂಡು ಮನನೊಂದರು. ಬಳಿಕ ಸ್ಥಳೀಯ ಪಂಚಾಯತ್ ಅಧ್ಯಕ್ಷರೂ ನಾಗರಿಕ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ತೋಯಜಾಕ್ಷ ಶೆಟ್ಟಿಯವರಿಗೆ ರು. 50 ಸಾವಿರ ನಗದನ್ನು ಮೊದಲ ಕಂತಾಗಿ ನೀಡಿ, ಪುನರ್ವಸತಿಗಾಗಿ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದೆಂದು ಭರವಸೆ ನೀಡಿದರು. ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ, ಕಾಳಿಕಾಂಬಾ ಭಜನಾ ಮಂಡಳಿ ಅಧ್ಯಕ್ಷ ಕೆ ಜಗದೀಶ್ ಶೆಟ್ಟಿ, ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಧನ್ಯ ಕುಮಾರ್ ರೈ ಮೊದಲಾದವರು ಜೊತೆಗಿದ್ದರು.