ಎಸ್‌ಡಿಪಿಐ, ಇತರೆ ಪಕ್ಷಗಳಿಂದ ಪರಿಣಾಮ ಇಲ್ಲ: ಕಾಂಗ್ರೆಸ್
ಮಂಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಎದುರಾಳಿ ಬಿಜೆಪಿ, ಎಸ್‌ಡಿಪಿಐ ಸಹಿತ ಇತರೆ ಪಕ್ಷಗಳು ಲೆಕ್ಕಕ್ಕೇ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಬಂಟ್ವಾಳ ಕ್ಷೇತ್ರ ಅಭ್ಯರ್ಥಿ ಬಿ.ರಮಾನಾಥ ರೈ ಹೇಳಿದರು.
ಮತಗಳನ್ನು ಪೋಲೂ ಮಾಡುವಷ್ಟು ಜನ ದಡ್ಡರಲ್ಲ. ಎಸ್‌ಡಿಪಿಐ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುರತ್ಕಲ್‌ನಲ್ಲಿ ವಿಜಯಕುಮಾರ್ ಶೆಟ್ಟಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಗ್ಗೆ ನನಗೇನು ಮಾಹಿತಿ ಇಲ್ಲ. ಗೆಲ್ಲುವ ಕುದುರೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆಯುವುದು ಸುಲಭವಲ್ಲ. ಇವೆಲ್ಲ ಸಾಮಾನ್ಯ ಎಂದರು. ಚುನಾವಣೆ ನಡೆಯುವವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಇಬ್ರಾಹಿಂ ಕೋಡಿಜಾಲ್‌ಗೆ ತಾತ್ಕಾಲಿಕವಾಗಿ ಹಸ್ತಾಂತರ ಮಾಡುವುದಾಗಿ ಹೇಳಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ದಿನ ಇನ್ನೂ ನಿಗದಿಯಾಗಿಲ್ಲ ಎಂದರು.
ಕೆಜೆಪಿ ಮುಖಂಡರ ಸೇರ್ಪಡೆ: ಕೆಜೆಪಿ ಯುವಘಟಕದ ಮುಖಂಡರಾದ ಕಿರಣ್ ಕುಮಾರ್ ಶೆಟ್ಟಿ, ಭಾಸ್ಕರ ಪೂಜಾರಿ ತಮ್ಮ ಬೆಂಬಲಿಗರ ಜತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶೀಘ್ರದಲ್ಲಿ ಜೆಡಿಎಸ್‌ನ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆ.ಆರ್.ಲೋಬೋ, ಐವನ್ ಡಿಸೋಜ, ಹರಿಕೃಷ್ಣ ಬಂಟ್ವಾಳ, ಮಾಜಿ ಮೇಯರ್ ಆಶ್ರಫ್, ಮಿಥುನ್ ರೈ, ಶಶಿಧರ ಹೆಗ್ಡೆ ಇದ್ದರು.
ಚರ್ಚ್, ಮಸೀದಿ, ದೇಗುಲ ಭೇಟಿ
ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಜಿಲ್ಲೆಯ ಧರ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಜಪೆ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಬಳಿ ಆಶೀರ್ವಾದ ಪಡೆದರು. ಕುದ್ರೋಳಿ ಕ್ಷೇತ್ರ, ಕೇಂದ್ರ ಜುಮ್ಮಾ ಮಸೀದಿ, ಉಳ್ಳಾಲ ಸಯ್ಯದ್ ಮದನಿ ದರ್ಗಾ, ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಳರಿಂದ ಆಶೀರ್ವಾದ ಪಡೆದರು.
--
ದ.ಕನ್ನಡ:10 ನಾಮಪತ್ರ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು ಹಾಗೂ ಸುಳ್ಯ ಕ್ಷೇತ್ರ ಸೇರಿ ಒಟ್ಟು 10 ನಾಮಪತ್ರ ಸಲ್ಲಿಕೆಯಾಗಿದೆ. ಇದರಲ್ಲಿ ಜೆಡಿಎಸ್ 2, ಎಸ್‌ಡಿಪಿಐ 2, ಕೆಜೆಪಿ 2 ಹಾಗೂ ಪಕ್ಷೇತರ 4 ನಾಮಪತ್ರ ಸೇರಿದೆ.
ಬೆಳ್ತಂಗಡಿಯಲ್ಲಿ 3 ನಾಮಪತ್ರ ಸಲ್ಲಿಕೆಯಾಗಿದ್ದು, ಸುಕೇಶ್ ಕುಮಾರ್ ಕೆಜೆಪಿ, ಪ್ರವೀಣ್‌ಚಂದ್ರ ಜೈನ್ ಜೆಡಿಎಸ್ ಹಾಗೂ ಅಬ್ದುಲ್ ರಜಾಕ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ಉತ್ತರದಲ್ಲಿ ಅಬೂಬಕ್ಕರ್ ಮತ್ತು ಅಬ್ದುಲ್ ಅಜೀಜ್ ಎಸ್‌ಡಿಪಿಐನಿಂದ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ದಕ್ಷಿಣದಲ್ಲಿ ಡೆರಿಕ್ ಪಿಂಟೋ, ಡೆರಿಕ್ ಪಿಂಟೋ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ, ಎಸ್.ಪಿ.ಚೆಂಗಪ್ಪ ಜೆಡಿಎಸ್, ನೌಷದ್ ಮೊಹ್ಮದ್ ಪಕ್ಷೇತರರಾಗಿ ನಾಮಪತ್ರ ಹಾಕಿದ್ದಾರೆ. ಮಂಗಳೂರು ಕ್ಷೇತ್ರದಿಂದ ಕಬೀರ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸುಳ್ಯದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಚಂದ್ರಾವತಿ ನಾಮಪತ್ರ ಸಲ್ಲಿಸಿದ್ದಾರೆ.