ಜೆಡಿಎಸ್ ಅಭ್ಯರ್ಥಿ ಚೆಂಗಪ್ಪ ನಾಮಪತ್ರ
ಮಂಗಳೂರು: ದಕ್ಷಿಣ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಮಂಗಳವಾರ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚೆಂಗಪ್ಪ, ಭ್ರಷ್ಟಾಚಾರ, ಭೂಹಗರಣ, ಅಕ್ರಮ ಗಣಿಗಾರಿಕೆಯಿಂದ ಜನರು ರೋಸಿ ಹೋಗಿದ್ದಾರೆ. ಕೇಂದ್ರ ಕಾಂಗ್ರೆಸ್ ಸರ್ಕಾರ ಬಹುಕೋಟಿ ಹಗರಣಗಳಲ್ಲಿ ಮುಳುಗಿ ಹೋಗಿದೆ. ಇದನ್ನು ಗಮನಿಸುತ್ತಿರುವ ರಾಜ್ಯದ ಜನತೆ ಜೆಡಿಎಸ್ನತ್ತ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು. ವಸಂತ ಪೂಜಾರಿ, ಸುಶೀಲ್ ನರೋನ್ಹ, ಮುನೀರ್ ಮುಕ್ಕಚ್ಚೇರಿ, ಗೋಪಾಲಕೃಷ್ಣ ಅತ್ತಾವರ, ರತ್ನಾಕರ ಸುವರ್ಣ ಇತರರು ಇದ್ದರು. ಜೆಡಿಎಸ್ ಪಕ್ಷದ ಒಳಗಿನ ಭಿನ್ನಾಭಿಪ್ರಾಯ, ಗಲಾಟೆ ಹಿನ್ನೆಲೆಯಲ್ಲಿ ಮಂಗಳವಾರ ಚೆಂಗಪ್ಪ ನಾಮಪತ್ರ ಸಲ್ಲಿಸುವ ವೇಳೆ ಬಿಗು ಪೊಲೀಸ್ ಬಂದೋಬಸ್ತ್ ಇತ್ತು.
ಡಿ.ಎಂ.ಅಸ್ಲಂ ಸವಾಲು: ಮಂಗಳವಾರ ಬೆಳಗ್ಗೆ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಅಲ್ಪಸಂಖ್ಯಾತ ಮುಖಂಡ ಡಿ.ಎಂ. ಅಸ್ಲಂ ಅಭ್ಯರ್ಥಿ ಆಯ್ಕೆ ಬಗ್ಗೆ ಅಪಸ್ವರ ವ್ಯಕ್ತಪಡಿಸಿದರು. ಚೆಂಗಪ್ಪ ಅವರು 1 ಸಾವಿರ ಮತ ಪಡೆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಅಸ್ಲಂ ಸವಾಲು ಹಾಕಿದರು.