ಬಂಟ್ವಾಳ: ಆಧಾರ್ ಲೋಪದೋಷ ಸರಿಪಡಿಸಲು ಸಾರ್ವಜನಿಕರ ಪರದಾಟ
ಬಂಟ್ವಾಳ: ಆಧಾರ್ ನೋಂದಣಿ ಕೇಂದ್ರದ ಸಿಬ್ಬಂದಿ ತಪ್ಪಿಗೆ ಜಿಲ್ಲಾಧಿಕಾರಿಗಳೇ ಹೊಣೆಯಂತೆ.. ಎನ್ನುವ ಮಾತುಗಳು ಬಿ.ಸಿ. ರೋಡಿನಲ್ಲಿ ಕೇಳಿಬರುತ್ತಿದೆ.
ಬಿ.ಸಿ. ರೋಡಿನ ಹಳೇ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಆಧಾರ್ ನೋಂದಣಿ ಕೇಂದ್ರದಲ್ಲಿ ಆಧಾರ್ ಗುರುತಿನ ಚೀಟಿಗೆ ಹೆಸರು ನೋಂದಾಯಿಸುವ ಸಂದರ್ಭದಲ್ಲಿ ಲೋಪದೋಷಗಳು ಉಂಟಾದರೆ ಅದನ್ನು ಸರಿಪಡಿಸಲು, ನೋಂದಣಿ ಕೇಂದ್ರದಲ್ಲಿ ಅವಕಾಶವೇ ಇಲ್ಲ, ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಬೇಕೆಂದು ಇಲ್ಲಿನ ಸಿಬ್ಬಂದಿ ನಾಗರಿಕರನ್ನು ಹಾದಿತಪ್ಪಿಸುತ್ತಿರುವುದು ಇದಕ್ಕೆ ಕಾರಣ.
ಲೋಪದೋಷಗಳ ತಿದ್ದುಪಡಿಗೆ 96 ಗಂಟೆ (4 ದಿನ)ಗಳ ಕಾಲವಕಾಶವಿದೆ ಎಂಬ ಉಲ್ಲೇಖ ಕೇಂದ್ರದಲ್ಲಿ ದೊರಕುವ ಸ್ವೀಕೃತಿ ಪತ್ರದಲ್ಲಿ ಇದ್ದರೂ, ಇಲ್ಲಿನ ಸಿಬ್ಬಂದಿ ಉದಾಸೀನತೆಯಿಂದಾಗಿ ಈಗಾಗಲೇ ಹಲವಾರು ನಾಗರಿಕರು ಪರದಾಡುವಂತಾಗಿದೆ.
ಸೋಮವಾರ ಬೆಳಗ್ಗೆ ಆಧಾರ್ ಕೇಂದ್ರದಲ್ಲಿ ಕಾವಳಪಡೂರು ಗ್ರಾಮದ ಮಹಿಳೆಯನ್ನು ಇಲ್ಲಿನ ಸಿಬ್ಬಂದಿ ಸತಾಯಿಸಿರುವುದು ಬೆಳಕಿಗೆ ಬಂದಿದೆ.
ಮಹಿಳೆಯ ಮಗಳ ಹೆಸರಿನಲ್ಲಿಯೇ ಲೋಪ ಕಂಡು ಬಂದಿದ್ದು, ಶನಿವಾರ ಪ್ರೇಮಲತಾ ಎಂಬ ಹೆಸರು ಕಂಪ್ಯೂಟರ್ ಮುದ್ರಣದ ಸಂದರ್ಭ ರಾಮಲಠಾ ಎಂದು ಮುದ್ರಣಗೊಂಡಿತ್ತು. ಈ ಬಗ್ಗೆ ಸೋಮವಾರ ನೋಂದಣಿ ಕೇಂದ್ರಕ್ಕೆ ಬಂದ ಮಹಿಳೆ ತಪ್ಪನ್ನು ಸರಿಪಡಿಸುವಂತೆ ಸಿಬ್ಬಂದಿಯಲ್ಲಿ ವಿನಂತಿಸಿಕೊಂಡಾಗ ಉಡಾಫೆಯಿಂದ ವರ್ತಿಸಿದ ಸಿಬ್ಬಂದಿ ಆಕೆಯನ್ನು ಜಿಲ್ಲಾಧಿಕಾರಿ ಕಚೇರಿಗೆ ಹೋಗುವಂತೆ ಸೂಚಿಸಿದ್ದರು. ಇದರಿಂದ ಕಂಗಲಾದ ಮಹಿಳೆ ಪಕ್ಕದ ಕೊಠಡಿಯಲ್ಲಿಯೇ ಕಾರ್ಯಾಚರಿಸುತ್ತಿರುವ ಮಾಧ್ಯಮದವರೊಂದಿಗೆ ತನ್ನ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ವಿಚಾರಿಸಲು ಹೋದ ಮಾಧ್ಯಮ ಪ್ರತಿನಿಧಿಗಳೊಂದಿಗೂ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಏಜೆನ್ಸಿಯ ಮುಖ್ಯಸ್ಥ ರಾಮಕೃಷ್ಣ ಅವರನ್ನು ಸಂಪರ್ಕಿಸಿದ ಮಾಧ್ಯಮ ಪ್ರತಿನಿಧಿಗಳು ಇಲ್ಲಿ ಸಾರ್ವಜನಿಕರಿಗಾಗಿರುವ ತೊಂದರೆಯ ಬಗ್ಗೆ ಗಮನ ಸೆಳೆದರು. ಕೂಡಲೇ ದೂರವಾಣಿಯ ಮೂಲಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಸ್ವೀಕೃತಿ ಪತ್ರದಲ್ಲಾಗಿರುವ ಲೋಪವನ್ನು ಸರಿಪಡಿಸಿ ಹೊಸ ಸ್ವೀಕೃತಿ ಪತ್ರವನ್ನು ಮಹಿಳೆಗೆ ನೀಡಿದರು.
ಪ್ರತಿ ದಿನವೂ ಇಂತಹ ಹಲವು ಪ್ರಕರಣಗಳು ನಡೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವೃದ್ಧರು, ಮಹಿಳೆಯರು, ಅನಕ್ಷರಸ್ಥರು ಇಲ್ಲಿನ ಸಿಬ್ಬಂದಿಯಿಂದಾಗಿ ಕಷ್ಟಪಡುತ್ತಿದ್ದಾರೆ.
ಕಂದಾಯ ಇಲಾಖಾಧಿಕಾರಿಗಳು ಚುನಾವಣಾ ಸಿದ್ಧತೆಯ ಗುಂಗಿನಲ್ಲಿದ್ದರೆ, ಜನಪ್ರತಿನಿಧಿಗಳು ಚುನಾವಣಾ ಪ್ರಚಾರದ ಬೆನ್ನು ಬಿದ್ದಿದ್ದಾರೆ. ಈ ನಡುವೆ ಆಧಾರ್ ನೋಂದಣಿ ಕೇಂದ್ರದ ಸಿಬ್ಬಂದಿ ತಮ್ಮದೇ ಕಾನೂನು ಎಂಬಂತೆ ನಾಗರಿಕರೊಂದಿಗೆ ವರ್ತಿಸುತಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದಿದೆ.