ಮಂಗಳೂರು ಕ್ಷೇತ್ರ: ಕುಡಿವ ನೀರಿಗೆ ಸಂಹಿತೆ ನೆಪ!
-ಆತ್ಮಭೂಷಣ್
ಮಂಗಳೂರು: ಕೊಳವೆಬಾವಿ ಇದೆ, ವಿದ್ಯುತ್ ಸಂಪರ್ಕ ಮಾತ್ರ ಬಾಕಿ... ಕೊಳವೆ ಬಾವಿ ಇರುವಲ್ಲಿ ಪೈಪ್ಲೈನ್ ಬಾಕಿ. ಕುಡಿವ ನೀರಿಗೆ ಮಾರುದೂರ ಹೋಗಬೇಕಾದ ಪರಿಸ್ಥಿತಿ.
ಇದು ಮಂಗಳೂರು ಕ್ಷೇತ್ರ(ಉಳ್ಳಾಲ)ದ ಸದ್ಯದ ಪರಿಸ್ಥಿತಿ. ಸೌಲಭ್ಯಗಳಿದ್ದರೂ ಬಳಸಿಕೊಳ್ಳಲಾಗದ ಅತಂತ್ರ ಸ್ಥಿತಿಯನ್ನು ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ತಂದೊಡ್ಡಲಾಗಿದೆ. ಹರೇಕಳ, ನ್ಯೂಪಡ್ಪು, ಪಾವೂರು, ಕೊಣಾಜೆ, ಬೆಳ್ಮ, ಕೋಟೆಕಾರು, ಸೋಮೇಶ್ವರ, ಕುಂಪಲಗಳಲ್ಲಿ ನೀರಿಗೆ ತತ್ವಾರ ತಲೆದೋರಿದೆ. ಇಲ್ಲಿನ ಜನತೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ನೀತಿಸಂಹಿತೆ ಕುಡಿವ ನೀರು ಪೂರೈಕೆಗೆ ಅನ್ವಯಾಗುವುದಿಲ್ಲ ಎಂದರೂ ಅಧಿಕಾರಿಗಳು ಕೇಳುತ್ತಿಲ್ಲ. ಕೊಳವೆಬಾವಿಗೆ ಪಂಪ್ ಇಳಿಸಬೇಕಾದರೆ ಟೆಂಡರ್ ಆಗಬೇಕು. ಟೆಂಡರ್ ಕರೆಯಲು ಅವಕಾಶವಿಲ್ಲ. ಪೈಪ್ಲೈನ್ ಹಾಕಲೂ ಅದೇ ತೊಂದರೆ. ಹಾಗಾಗಿ ಹಿಂದೆ ಕೊಳವೆಬಾವಿ ಕೊರೆದಿದ್ದರೂ ಈಗ ನೀತಿ ಸಂಹಿತೆ ಇದನ್ನು ಪೂರ್ಣಗೊಳಿಸಲು ಬಿಡುತ್ತಿಲ್ಲ. ಸಮುದ್ರ ಹತ್ತಿರವಿದ್ದರೂ ಕುಡಿವ ನೀರಿನ ಬವಣೆ ತಪ್ಪಿದ್ದಲ್ಲ ಎಂದು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ ಇಲ್ಲಿನ ಜನತೆ.
ಟ್ಯಾಂಕರ್ ನೀರಿಗೂ ಕುತ್ತು: ಉಳ್ಳಾಲ ಪುರಸಭಾ ಚುನಾವಣೆ ಈಚೆಗಷ್ಟೇ ಮುಗಿದಿತ್ತು. ಅಷ್ಟರಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆಯಿಂದ ಹೊರಬರಲಾಗಲಿಲ್ಲ. ಇಲ್ಲಿನ ನೀರಿನ ಸಮಸ್ಯೆ ಸ್ವಲ್ಪ ಭಿನ್ನವಾದ್ದು. ಉಳ್ಳಾಲ ಮಾರುಕಟ್ಟೆ, ಹೊಯ್ಗೆ ಪ್ರದೇಶ, ಪೆರ್ಮನ್ನೂರಿನ ಗಂಡಿ, ಹಿಲಾರಿ ನಗರ, ಸಂತೋಷ್ ನಗರ, ಚೆಂಬುಗುಡ್ಡೆ, ಕೆರೆಬೈಲು, ಸೇವಂತಿಗುಡ್ಡ ಪ್ರದೇಶಗಳಲ್ಲಿ ನೀರಿನ ಬರ. ಟ್ಯಾಂಕರ್ನಲ್ಲಿ ನೀರು ಪೂರೈಕೆಗೆ ರಾಜಕೀಯ ಪಕ್ಷಗಳೇ ಅಡ್ಡಿ. ಹೀಗೆ ನೀರು ಪೂರೈಸಿದರೆ ಯಾರಾದರೊಬ್ಬ ಜನಪ್ರತಿನಿಧಿ ಟ್ಯಾಂಕರ್ನ ಹಿಂದಿರುತ್ತಾನೆ. ಅಥವಾ ಜನಪ್ರತಿನಿಧಿಯೊಬ್ಬ ಕಳುಹಿಸಿದ್ದು ಎಂದು ಇನ್ನೊಂದು ಪಕ್ಷದವರು ದೂರುತ್ತಾರೆ. ಹಾಗಾಗಿ ರಾಜಕೀಯ ಮೇಲಾಟದಿಂದ ಜನತೆಗೆ ಕುಡಿವ ನೀರು ಸಿಗುತ್ತಿಲ್ಲ. ಅಧಿಕಾರಿಗಳ ಬಳಿ ಪ್ರಶ್ನಿಸಿದರೆ ನೀತಿ ಸಂಹಿತೆಯ ಕುಂಟು ನೆಪ ಹೇಳಿ ನುಣುಚಿಕೊಳ್ಳುತ್ತಾರೆ.
ಜನರ ಒತ್ತಡ ಜಾಸ್ತಿಯಾದಾಗ ಪುರಸಭಾ ಮುಖ್ಯಾಧಿಕಾರಿ ಒಮ್ಮೆ ಒಂದೆಡೆಗೆ ಟ್ಯಾಂಕರ್ ನೀರು ಪೂರೈಸಿ ಸುಮ್ಮನಾಗುತ್ತಾರೆ. ನೀತಿಸಂಹಿತೆ ಭೀತಿ ಇವರನ್ನೂ ಕಾಡುತ್ತಿದೆ.
ಸ್ವಚ್ಛತೆಗೂ ತೊಂದರೆ: ಪುರಸಭಾ ವ್ಯಾಪ್ತಿಯಲ್ಲಿ ದಿನವಹಿ ಸ್ವಚ್ಛತಾ ಕಾರ್ಯಕ್ಕೆ ನೀತಿ ಸಂಹಿತೆ ಧಕ್ಕೆ ತಂದಿದೆ ಎಂದರೆ ಆಶ್ಚರ್ಯವಾಗಬಹುದು. ಕೆಲವು ಕಾರ್ಮಿಕರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿದ್ದಾರಂತೆ. ಪುರಸಭೆಯ ಪರಿಸರ ಅಧಿಕಾರಿ, ಎಂಜಿನಿಯರ್ ಕೂಡ ಚುನಾವಣಾ ಕೆಲಸದಲ್ಲಿದ್ದಾರೆ. ಸಕಾಲ ಯೋಜನೆಗೆ ಅರ್ಜಿ ನೀಡಿದರೆ ಅಲ್ಲಿಯೂ ಸಿಬ್ಬಂದಿ ಕೊರತೆ. ದಾರಿದೀಪ ನಿರ್ವಹಣೆ ಗುತ್ತಿಗೆ ಬದಲಾಗಿದೆ. ದುರಸ್ತಿಗೆ ಹೋದ ದೀಪಗಳು ಮರಳಿ ಬಂದಿಲ್ಲ. ಚರಂಡಿ ಹೂಳೆತ್ತುವ ಕಾಮಗಾರಿ ಇನ್ನೂ ಶುರುವಾಗಿಲ್ಲ. ಹಠಾತ್ತನೆ ಮಳೆ ಬಂದರೆ ದೇವರೇ ಗತಿ ಎನ್ನುತ್ತಾರೆ ಉಳ್ಳಾಲ ನಿವಾಸಿ ಫಾರೂಕ್.
ಅಡ್ಯಾರು-ಕೊಂಡಾಣ ರಸ್ತೆ ಸೇರಿದಂತೆ ಕೆಲವು ರಸ್ತೆ ಕಾಮಗಾರಿ ಅರ್ಧದಲ್ಲೇ ನಿಂತಿದೆ. ತುಂಬೆ ಸಂಪರ್ಕ ರಸ್ತೆಗೆ ಟೆಂಡರ್ ಕರೆಯಲು ಬಾಕಿ ಉಳಿದಿದೆ. ಮೇ ಬಂದಂತೆಂದರೆ ಮಳೆಯ ಭೀತಿ. ಕಾಮಗಾರಿ ಮುಂದಿನ ವರ್ಷಕ್ಕೆ ಮುಂದೂಡಬೇಕಾದ್ದು ಅನಿವಾರ್ಯ.