ಸೂಕ್ಷ್ಮ, ಸರಳ ಕಥೆ ಹೆಣೆಯುವ ಜಾಣ್ಮೆ ತ್ರಿವೇಣಿಯಲ್ಲಿತ್ತು: ಭಾರತಿ
ಕಾಂತಾವರ: ಭಾಷಾ ನಿರ್ವಹಣೆಯಲ್ಲಿ ಎಲ್ಲಿಯೂ ಕೃತಕತೆಗೆ ಹೆಚ್ಚು ಒತ್ತು ನೀಡದೆ ಸಹಜವಾಗಿ ಮತ್ತು ಸೂಕ್ಷ್ಮವಾಗಿ ಹಾಗೂ ಸರಳವಾಗಿ ಕಥಾ ಹಂದರವನ್ನು ಹೆಣೆಯುವ ಜಾಣ್ಮೆ ತ್ರಿವೇಣಿಯವರದ್ದಾಗಿತ್ತು ಎಂದು ಸಾಹಿತಿ ಭಾರತಿ ಕಾಸರಗೋಡು ಹೇಳಿದರು.
ಅವರು ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ತ್ರಿವೇಣಿಯವರ 'ಕಾಶೀಯಾತ್ರೆ' ಕಾದಂಬರಿ ಕುರಿತು ಮಾತನಾಡಿ, ಅನಾರೋಗ್ಯದಿಂದಾಗಿ ತನ್ನ 33ನೇ ವಯಸ್ಸಿನಲ್ಲಿಯೇ ತೀರಿಕೊಂಡ ತ್ರಿವೇಣಿಯವರು ಕೇವಲ 13 ವರ್ಷಗಳ ಅವಧಿಯಲ್ಲಿ 20 ಕಾದಂಬರಿ ಹಾಗೂ 41 ಸಣ್ಣ ಕಥೆಗಳನ್ನು ರಚಿಸಿದರು ಎಂದು ತಿಳಿಸಿದರು.
ಸ್ವತಃ ಮನಶಾಸ್ತ್ರವನ್ನು ಅಧ್ಯಯನ ಮಾಡಿದ್ದ ತ್ರಿವೇಣಿಯವರು ಮನುಷ್ಯ ಮನುಷ್ಯರ ನಡುವಿನ ಉದಾತ್ತ ಸದ್ಗುಣಗಳು, ಹೆಣ್ಣಿನ ಸಹನೆ, ತ್ಯಾಗ ಗುಣ ಹಾಗೂ ನಿಷ್ಕಪಟವಾದ ಸ್ವಭಾವಗಳನ್ನು ಬಹಳ ಸರಳ ಭಾಷೆಯಲ್ಲಿ ಸಮರ್ಥವಾಗಿ ತನ್ನ ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ ಎಂದರು.
ವಿಧವೆ ಪಾತಜ್ಜಿಯು ಕಾಶೀಯಾತ್ರೆಯ ಸಂಕಲ್ಪದೊಂದಿಗೆ ಕೂಡಿಟ್ಟ ತನ್ನ ಜೀವಮಾನದ ದುಡಿಮೆಯ ಹಣವನ್ನು ಕೊನೆಯಲ್ಲಿ ಅನಾಥ ಹೆಣ್ಣು ಮಗಳ ಮದುವೆಗಾಗಿ ಅರ್ಪಿಸಿ ಅದರಲ್ಲಿಯೇ ಕಾಶೀಯಾತ್ರೆಯ ಧನ್ಯತೆಯನ್ನು ಕಾಣುವ ಹೃದಯಸ್ಪರ್ಶ ಕಥೆಯೇ ತ್ರಿವೇಣಿಯವರ ಕಾಶೀಯಾತ್ರೆ ಕಾದಂಬರಿಯ ಮುಖ್ಯ ವಸ್ತು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಭಾರತಿ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು. ನುಡಿನಮನದ ನಿರಂತರ ಪ್ರಾಯೋಜಕ ಚಂದ್ರಕುಮಾರ್ ಪಡಿವಾಳ್, ತೀರ್ಥಹಳ್ಳಿ ಕವಲೇದುರ್ಗ ಸಂಸ್ಥಾನ ಮಠದ ರಾಜಗುರು ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ ಇದ್ದರು.
ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರಾಮಕೃಷ್ಣ ಹೆಗಡೆ ಸ್ವಾಗತಿಸಿ, ಬೇಲಾಡಿ ರಾಮಚಂದ್ರ ಆಚಾರ್ಯ ವಂದಿಸಿದರು.