ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಣಕಾಸು ಕಂಪನಿಗಳ ಎಸ್‌ಎಂಎಸ್ ಬಗ್ಗೆ ಎಚ್ಚರ

Vishwanath S
Updated On : 17 Apr 2013, 1:31 am

ಕ.ಪ್ರ. ವಾರ್ತೆ  ,  ಮಂಗಳೂರು  ,  ಏ.16
ಹಣಕಾಸು, ಲೇವಾದೇವಿ ವ್ಯವಹಾರ ನಡೆಸಲು ಎಸ್‌ಎಂಎಸ್ ಮುಖೇನ ಗ್ರಾಹಕರನ್ನು ಸೆಳೆಯುವ ಹಣಕಾಸು ಕಂಪನಿಗಳ ಪ್ರಯತ್ನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಷೇಧಿಸಿದ್ದು, ಇದರ ಬಗ್ಗೆ ಗ್ರಾಹಕರು ಜಾಗೃತರಾದುವಂತೆ ಆರ್‌ಬಿಐ ಉಪ ಗವರ್ನರ್ ಡಾ.ಕೆ.ಸಿ.ಚಕ್ರವರ್ತಿ ಹೇಳಿದರು.
 ಮಂಗಳವಾರ ಕಾರ್ಪೊರೇಷನ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ 'ಬ್ಯಾಂಕುಗಳ ಗ್ರಾಹಕರ ಪುರಭವನ ಕಾರ್ಯಕ್ರಮ'ದಲ್ಲಿ ಅವರು ಗ್ರಾಹಕರೊಂದಿಗೆ ಸಂವಾದ ನಡೆಸಿದರು.
 ಎಸ್‌ಎಂಎಸ್ ಮುಖೇನ ಗ್ರಾಹಕರನ್ನು ಸೆಳೆದು ಮೋಸ ಮಾಡುತ್ತಿವೆ. ಅಂಥವರ ವಿರುದ್ಧ ಆರ್‌ಬಿಐ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಗ್ರಾಹಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಡಾ. ಚಕ್ರವರ್ತಿ, ಆರ್‌ಬಿಐ ಕೂಡ ಅದನ್ನು ನಿಷೇಧಿಸಿದೆ. ಅಂಥ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದೆ. ಜಗತ್ತಿನಲ್ಲಿ ಯಾವುದೂ ಉಚಿತವಿಲ್ಲ ಎಂದು ಗ್ರಾಹಕರು ಅರಿಯಬೇಕೆಂದರು.
ಮ್ಯಾನೇಜರ್‌ಗೆ ಅಧಿಕಾರ: ಗ್ರಾಹಕರಿಗೆ ಸಾಲ ನೀಡಬೇಕೇ, ಬೇಡವೇ ಎಂಬ ತೀರ್ಮಾನ ಆಯಾ ಬ್ಯಾಂಕ್ ಮ್ಯಾನೇಜರ್‌ಗೆ ಬಿಟ್ಟ ವಿಷಯ. ಸೂಕ್ತ ದಾಖಲೆಗಳಿದ್ದಲ್ಲಿ ಸಾಲ ನೀಡಬಹುದು. ಇದರಲ್ಲಿ ಆರ್‌ಬಿಐ ಮೂಗುತೂರಿಸುವಂತಿಲ್ಲ. ಸಾಲ ಎನ್ನುವುದು ಸೇವೆ ಅಲ್ಲ ಎಂದರು.
ನೋಟಿನಲ್ಲಿ ಬರೀಬೇಡಿ: ನೋಟುಗಳಲ್ಲಿ ಬ್ಯಾಂಕಿನವರೇ ಬರೆಯುವುದು ಸರಿಯಲ್ಲ. ನೋಟಿನಲ್ಲಿ ಯಾವುದೇ ರೀತಿಯ ಹಸ್ತಾಕ್ಷರ ಬರೆಯಬಾರದು ಎಂದು ಆರ್‌ಬಿಐ ಹೇಳಿದ್ದರೂ ಕೆಲವು ಬ್ಯಾಂಕ್‌ಗಳಲ್ಲಿ ಅಂಕೆ ಸಂಖ್ಯೆಗಳನ್ನು ಬರೆಯಲಾಗುತ್ತಿದೆ. ಇದಕ್ಕೆ ಬ್ಯಾಂಕ್ ಅಧಿಕಾರಿಗಳೇ ಸ್ವಯಂ ಕಟ್ಟುಪಾಡು ಹಾಕಿಕೊಳ್ಳಬೇಕು ಎಂದರು. ಬ್ಯಾಂಕ್‌ಗಳು ಹರಿದ, ಚಿಂದಿಯಾದ ನೋಟುಗಳನ್ನು ವಾಪಾಸ್ ಗ್ರಾಹಕರಿಂದ ಪಡೆದು ಹೊಸ ನೋಟು ನೀಡಬೇಕು ಎಂದರು.
ಹೀಗೆ ದೂರು ನೀಡಿ: ಬ್ಯಾಂಕ್‌ಗಳು ಸೇವಾ ನ್ಯೂನತೆ ಹೊಂದಿದ್ದರೆ ಮೊದಲು ಬ್ಯಾಂಕಿನಲ್ಲಿರುವ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಬೇಕು. 30 ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ನೇರವಾಗಿ ಆರ್‌ಬಿಐಗೆ ದೂರು ನೀಡಲು ಬರುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement