ಹಣಕಾಸು ಕಂಪನಿಗಳ ಎಸ್‌ಎಂಎಸ್ ಬಗ್ಗೆ ಎಚ್ಚರ
ಮಂಗಳೂರು: ಹಣಕಾಸು, ಲೇವಾದೇವಿ ವ್ಯವಹಾರ ನಡೆಸಲು ಎಸ್‌ಎಂಎಸ್ ಮುಖೇನ ಗ್ರಾಹಕರನ್ನು ಸೆಳೆಯುವ ಹಣಕಾಸು ಕಂಪನಿಗಳ ಪ್ರಯತ್ನವನ್ನು ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ನಿಷೇಧಿಸಿದ್ದು, ಇದರ ಬಗ್ಗೆ ಗ್ರಾಹಕರು ಜಾಗೃತರಾಗಿರುವಂತೆ ಆರ್‌ಬಿಐ ಉಪ ಗವರ್ನರ್ ಡಾ.ಕೆ.ಸಿ.ಚಕ್ರವರ್ತಿ ಹೇಳಿದ್ದಾರೆ.
ಮಂಗಳವಾರ ಕಾರ್ಪೊರೇಷನ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ 'ಬ್ಯಾಂಕುಗಳ ಗ್ರಾಹಕರ ಪುರಭವನ ಕಾರ್ಯಕ್ರಮ'ದಲ್ಲಿ ಅವರು ಗ್ರಾಹಕರ ಪ್ರಶ್ನೆಗೆ ಉತ್ತರಿಸಿದರು.
ಎಸ್‌ಎಂಎಸ್ ಮುಖೇನ ಗ್ರಾಹಕರನ್ನು ಸೆಳೆದು ಮೋಸ ಮಾಡುತ್ತಿವೆ. ಅಂಥವರ ವಿರುದ್ಧ ಆರ್‌ಬಿಐ ಕಟ್ಟುನಿಟ್ಟು ಕ್ರಮ ಕೈಗೊಳ್ಳಬೇಕು ಎಂಬ ಗ್ರಾಹಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಡಾ.ಕೆ.ಸಿ.ಚಕ್ರವರ್ತಿ, ಆರ್‌ಬಿಐ ಕೂಡ ಅದನ್ನು ನಿಷೇಧಿಸಿದೆ. ಅಂಥ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದೆ. ಜಗತ್ತಿನಲ್ಲಿ ಯಾವುದೂ ಉಚಿತವಿಲ್ಲ ಎಂದು ಗ್ರಾಹಕರು ಅರಿಯಬೇಕು ಎಂದು ಹೇಳಿದರು.
ಮೆನೇಜರ್ ಅಧಿಕಾರ: ಗ್ರಾಹಕರಿಗೆ ಸಾಲ ನೀಡಬೇಕೇ/ಬೇಡವೇ ಎಂಬ ತೀರ್ಮಾನ ಆಯಾ ಬ್ಯಾಂಕ್ ಮೆನೇಜರ್‌ಗೆ ಬಿಟ್ಟ ವಿಷಯ. ಸೂಕ್ತ ದಾಖಲೆಗಳಿದ್ದಲ್ಲಿ ಸಾಲ ನೀಡಬಹುದು. ಇದರಲ್ಲಿ ಆರ್‌ಬಿಐ ಮೂಗುತೂರಿಸುವಂತಿಲ್ಲ. ಸಾಲ ಎನ್ನುವುದು ಸೇವೆ ಅಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಜನಸಂಖ್ಯೆ ಆಧಾರವಾಗಿಟ್ಟುಕೊಳ್ಳದೆ ಸಾಧ್ಯವಾದಷ್ಟು ಶಾಖೆ ತೆರೆಯುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ನೋಟಿನಲ್ಲಿ ಬರೀಬೇಡಿ: ನೋಟುಗಳಲ್ಲಿ ಬ್ಯಾಂಕಿನವರೇ ಬರೆಯುವುದು ಸರಿಯಲ್ಲ. ನೋಟಿನಲ್ಲಿ ಯಾವುದೇ ರೀತಿಯ ಹಸ್ತಾಕ್ಷರ ಬರೆಯಬಾರದು ಎಂದು ಆರ್‌ಬಿಐ ಹೇಳಿದ್ದರೂ ಕೆಲವು ಬ್ಯಾಂಕ್‌ಗಳಲ್ಲಿ ಅಂಕೆ ಸಂಖ್ಯೆಗಳನ್ನು ಬರೆಯಲಾಗುತ್ತಿದೆ. ಇದಕ್ಕೆ ಬ್ಯಾಂಕ್ ಅಧಿಕಾರಿಗಳೇ ಸ್ವಯಂ ಕಟ್ಟುಪಾಡು ಹಾಕಿಕೊಳ್ಳಬೇಕು ಎಂದು ಹೇಳಿದರು. ಬ್ಯಾಂಕ್‌ಗಳು ಹರಿದ, ಚಿಂದಿಯಾದ ನೋಟುಗಳನ್ನು ವಾಪಾಸ್ ಗ್ರಾಹಕರಿಂದ ಪಡೆದು ಹೊಸ ನೋಟು ನೀಡಬೇಕು ಎಂದರು.
ಹೀಗೆ ದೂರು ನೀಡಿ: ಬ್ಯಾಂಕ್‌ಗಳು ಸೇವಾ ನ್ಯೂನತೆ ಹೊಂದಿದ್ದರೆ ಮೊದಲು ಬ್ಯಾಂಕಿನಲ್ಲಿರುವ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಬೇಕು. 30 ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ನೇರವಾಗಿ ಆರ್‌ಬಿಐಗೆ ದೂರು ನೀಡಲು ಬರುವುದಿಲ್ಲ ಎಂದು ಹೇಳಿದರು.
ಬ್ಯಾಂಕ್‌ಗಳಲ್ಲಿ ಸೇವಾ ತೊಂದರೆ ಕಾಣಿಸಿದರೆ ಅದಕ್ಕೆ ಬ್ಯಾಂಕ್ ಜವಾಬ್ದಾರಿಯೇ ವಿನಃ ಆರ್‌ಬಿಐ ಅಲ್ಲ. ಗ್ರಾಹಕ ಸ್ನೇಹಿ ಸೇವೆ ನೀಡುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಮಾರ್ಗದರ್ಶನ ಮಾಡುತ್ತದೆ. ಅದನ್ನು ಪಾಲಿಸಬೇಕಾದ್ದು ಬ್ಯಾಂಕ್‌ಗಳ ಕರ್ತವ್ಯ. ಇದರಲ್ಲಿ ಹೆಚ್ಚುಕಮ್ಮಿಯಾದರೆ ಗ್ರಾಹಕರು ನ್ಯಾಯಕ್ಕೆ ಕೋರ್ಟ್ ಅಥವಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು ಎಂದರು.
ನಿವೃತ್ತಿ ವೇತನ ಪಾವತಿ ವೇಳೆ ವ್ಯಕ್ತಿ ಮೃತಪಟ್ಟರೆ ಆತನ ಕುಟುಂಬಕ್ಕೆ ಕೂಡಲೇ ನಿವೃತ್ತಿ ವೇತನ ಹಸ್ತಾಂತರವಾಗಬೇಕು. ಇಲ್ಲಿ ಕುಟುಂಬದವರು ವೃಥಾ ಅಲೆದಾಟ ನಡೆಸುವಂತಾಗಬಾರದು ಎಂದು ಗ್ರಾಹಕರೊಬ್ಬರು ಪ್ರಸ್ತಾಪಿಸಿದರು. ಇದನ್ನು ಪರಿಶೀಲಿಸುವುದಾಗಿ ಡಾ.ಕೆ.ಸಿ.ಚಕ್ರವರ್ತಿ ಭರವಸೆ ನೀಡಿದರು.
ಗೋಲ್ಡ್ ಮರಾಟ ಯಾಕೆ?: ಬ್ಯಾಂಕ್‌ಗಳಲ್ಲಿ ಗೋಲ್ಡ್ ಮರಾಟ ಸರಿಯಾದ ಕ್ರಮವಲ್ಲ. ಮೊನ್ನೆ ಬಜೆಟ್‌ನಲ್ಲಿ ವಿತ್ತ ಸಚಿವರು ಇದನ್ನು ಹೊರಗಿಡುವುದಾಗಿ ಹೇಳಿದ್ದರೂ ಬ್ಯಾಂಕ್‌ಗಳಲ್ಲಿ ಮೆನೇಜರ್‌ಗಳು ಗುರಿ ತಲುಪಲು ಗೋಲ್ಡ್‌ನ್ನು ಒತ್ತಾಯಪೂರ್ವಕ ಮಾರಾಟ ಮಾಡುತ್ತಾರೆ ಎಂದು ಗ್ರಾಹಕರೊಬ್ಬರು ಗಮನಕ್ಕೆ ತಂದರು.
ಇದು ಸರಿಯಾದ ಕ್ರಮವಲ್ಲ. ಇದನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ಡಾ.ಕೆ.ಸಿ.ಚಕ್ರವರ್ತಿ ಹೇಳಿದರು.
ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್, ಬಿಎಸ್‌ಎಸ್‌ಬಿಐ ಅಧ್ಯಕ್ಷ ಎ.ಸಿ.ಮಹಾಜನ್, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಸಿಂಘ್ವಿ, ವಿಜಯಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉಪೇಂದ್ರ ಕಾಮತ್, ಆರ್‌ಬಿಐ ಕರ್ನಾಟಕ ವೃತ್ತದ ಒಂಬುಡ್ಸ್‌ಮನ್ ಪಳನಿಸ್ವಾಮಿ ಹಾಜರಿದ್ದರು.