21ರಂದು ಬ್ರಾಹ್ಮಣ ಜಾಗೃತಿ ಸಮ್ಮೇಳನ
ಮಂಗಳೂರು: ಶಿವಳ್ಳಿ, ಹವ್ಯಕ, ಕೋಟ, ಸ್ಥಾನಿಕ ಕೋಟೇಶ್ವರ, ಚಿತ್ಪಾವನ, ಕರ್ಹಾಡ, ದೇಶಸ್ಥ ಎಲ್ಲ ಬ್ರಾಹ್ಮಣ ವರ್ಗದವರ ಸಮಾವೇಶ 'ಬ್ರಾಹ್ಮಣ ಜಾಗೃತಿ ಸಮ್ಮೇಳನ' ಏ.21ರಂದು ನಗರದ ಸಂಘನಿಕೇತನದಲ್ಲಿ ಖ್ಯಾತ ಆಹಾರೋದ್ಯಮಿ, ಅಂಕಣಕಾರ ಡಾ.ಪಿ.ಸದಾನಂದ ಮಯ್ಯ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣರ ಒಕ್ಕೂಟ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು. ಸಂವೇದನೆ, ಸಂಘಟನೆ, ಸಂವರ್ಧನೆ, ಸಂರಕ್ಷಣೆ ಉದ್ದೇಶದಡಿ ಸಮ್ಮೇಳನ ಬೆಳಗ್ಗೆ 6ರಿಂದ ರಾತ್ರಿ 9ರ ವರೆಗೆ ನಡೆಯಲಿದೆ. ಬೆಳಗ್ಗೆ 6ರಿಂದ ಹೋಮ, ಹವನಾದಿಗಳು ಪ್ರಾರಂಭವಾಗಲಿದ್ದು, 8ಕ್ಕೆ ಮೆರವಣಿಗೆ, 9ರಿಂದ ಸಮ್ಮೇಳನ ಉದ್ಘಾಟನೆಯಾಗಲಿದ್ದು, ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ, ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಸ್ವಾಮೀಜಿ, ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಳ್ಳುವರು ಎಂದರು.
ಬೆಳಗ್ಗೆ 11ರಿಂದ ಪ್ರಸ್ತುತ ಜ್ವಲಂತ ಸಮಸ್ಯೆಗಳ ವಿಚಾರವಾಗಿ ತಜ್ಞರಿಂದ ಮತ್ತು ಸ್ವಾಮೀಜಿಯವರಿಂದ ಚಿಂತನ ಮತ್ತು ಮಾರ್ಗದರ್ಶನ ನಡೆಯಲಿದೆ. ಮಧ್ಯಾಹ್ನ 1ರಿಂದ ಪುರಾಣ ವಾಚನ, ಚೂರ್ಣಿಕಾ, ಮಾಲಿಕಾ ಮಂಗಳಾರತಿ, 2.30ರಿಂದ ಚಿಂತನ, ಮಾರ್ಗದರ್ಶನ, ಸಮಾಜದ ಸಾಧಕ ಗಣ್ಯರಿಗೆ ಸಾಧನಾ ಪುರಸ್ಕಾರ, ಸಂಜೆ 4ಕ್ಕೆ ಸಮಾರೋಪ, 6ರಿಂದ ನಾದ, ತಾಳ, ಲಯ, ನೃತ್ಯ, ಯಕ್ಷಗಾನ ವೈಭವ ಜರುಗಲಿದೆ ಎಂದರು.
ಕಾಸರಗೋಡು, ಕೊಡಗು, ದ.ಕ, ಉಡುಪಿ, ಉತ್ತರ ಕನ್ನಡ ಹಾಗೂ ಹೊರ ಜಿಲ್ಲೆಗಳ ಎಲ್ಲ ಬ್ರಾಹ್ಮಣ ವರ್ಗದಿಂದ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಮಳಿಗೆ, ಉದ್ಯೋಗ ಮಾಹಿತಿ ಪುಸ್ತಕ, ವಿವಾಹ ವೇದಿಕೆ, ಧಾರ್ಮಿಕ ಗ್ರಂಥ ಮಳಿಗೆ, ಮಯ್ಯಾಸ್ ಆಹಾರೋತ್ಪನ್ನ ಮಳಿಗೆಗಳು ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹರಿಕೃಷ್ಣ ಪುನರೂರು, ಎನ್.ಕೆ.ಜಗನ್ನಿವಾಸ ರಾವ್, ಸಿ.ಎಸ್.ರಾವ್, ಶರವು ರಾಘವೇಂದ್ರ ಶಾಸ್ತ್ರೀ, ಪೊಳಲಿ ನಿತ್ಯಾನಂದ ಕಾರಂತ ಮತ್ತಿತರರಿದ್ದರು.
ಸಮ್ಮೇಳನಾಧ್ಯಕ್ಷ ಸದಾನಂದ ಮಯ್ಯ
ಬ್ರಾಹ್ಮಣ ಜಾಗೃತಿ ಸಮ್ಮೇಳನಾಧ್ಯಕ್ಷ ಡಾ.ಪಿ.ಸದಾನಂದ ಮಯ್ಯ ಅವರು ಬೆಂಗಳೂರಿನ ಮಯ್ಯಾಸ್ ಬಿವರೇಜ್ಸ್ ಮತ್ತು ಫುಡ್ ಪ್ರೈ.ಲಿ.ನ ಮಾಲಕರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಇವರನ್ನು ತುಮಕೂರು ವಿವಿ ಫುಡ್ ಟೆಕ್ನಾಲಜಿ ಬಗ್ಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ಜೀರ್ಣೋದ್ಧಾರದಲ್ಲಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿ ಬ್ರಾಹ್ಮಣ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಭಾರ್ಗವ ಪ್ರಶಾಂತ, ನರಸಿಂಹ, ಡಿಫೆನ್ಸ್ ಟೆಕ್ನಾಲಜಿ ಎಫ್ಯ್ಸೇಷ್ಶನ್, ಕನ್ನಡ ರಾಜ್ಯೋತ್ಸವ, ಆರ್ಯಭಟ, ಕೆಂಪೇಗೌಡ ಮೊದಲಾದ ಪ್ರಶಸ್ತಿಗಳು ಇವರಿಗೆ ಲಭಿಸಿದೆ. ಡಾ.ಮಯ್ಯರು ಆಹಾರ ವಿಜ್ಞಾನ ತಂತ್ರಜ್ಞಾನ ಕೇಂದ್ರ ಸ್ಥಾಪಿಸಿ ಪಾಕಶಾಸ್ತ್ರದಲ್ಲಿ ಒಂದು ಆಂದೋಲನ ಮಾಡಿದ್ದಾರೆ. ಸಾಟಿಯಿಲ್ಲದ ಸಾಧನೆಯಿಂದ ಉದಾತ್ತ ಧ್ಯೇಯ ಧೋರಣೆಯಿಂದ ಶಿಸ್ತುಬದ್ಧ ಜೀವನ ಶೈಲಿಯಿಂದ ಪ್ರಸಿದ್ಧರು.