ಗೂಂಡಾಗಿರಿ ನಿವಾರಿಸಿದ ಬಿಜೆಪಿ ಬೆಂಬಲಿಸಿ: ಡೀವಿ
ಉಪ್ಪಿನಂಗಡಿ: ಭೀತಿ ಮೂಡಿಸಿ, ಗೂಂಡಾಗಿರಿ ನಡೆಸಿ, ಜನತೆಯ ನೆಮ್ಮದಿ ಕೆಡಿಸೋ ಪಕ್ಷ ಮತ್ತೆ ಪುತ್ತೂರು ವಿಧಾನ ಸಭಾ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಯತ್ನಿಸುತ್ತಿದೆ. ಕಾಂಗ್ರೆಸ್ಸಿನ ಯಾವ ಭೀತಿಯನ್ನು- ಗೂಂಡಾಗಿರಿಯನ್ನು ಸವಾಲಾಗಿ ಸ್ವೀಕರಿಸಿ ಅದನ್ನು ನಿವಾರಣೆ ಮಾಡಲಾಗಿತ್ತೋ ಅಂತಹ ಬಿಜೆಪಿಯನ್ನೇ ಮತ್ತೆ ಗೆಲ್ಲಿಸಿ ಅಶೀರ್ವದಿಸಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿನಂತಿಸಿದರು.
ಮಂಗಳವಾರದಂದು ಅವರು ಉಪ್ಪಿನಂಗಡಿಯಲ್ಲಿ ಬಿಜೆಪಿಯ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ನಾಲ್ಕು ಅವಧಿಯಲ್ಲಿ ಪುತ್ತೂರಿನಲ್ಲಿ ಬಿಜೆಪಿಯನ್ನು ಆಶೀರ್ವದಿಸಿದ್ದೀರಿ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಕ್ಷದ ಶ್ರಮವನ್ನು ಕಂಡಿದ್ದೀರಿ. ನಾವು ಜನಪ್ರತಿನಿಧಿಗಳಾಗಿ ಎಂದೂ ರಾಜಕೀಯ ವಿರೋಧಿ ನೀತಿ ಅನುಸರಿಸಿಲ್ಲ. ರಾಜಕೀಯ ವಿರೋಧಿಗಳ ದಮನಕ್ಕೆ ಗಮನ ಹರಿಸಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಸಾಯಂಕಾಲ ವಾಯಿತ್ತೇಂದರೆ ಬೀದಿಗೆ ಕಾಲಿಡದೇ ಮನೆಯೊಳಗಿರಬೇಕಾದ ಸ್ಥಿತಿ ಬಿಜೆಪಿಯನ್ನು ಬೆಂಬಲಿಸಿದ ಬಳಿಕ ನಿವಾರಣೆಯಾಗಿದೆ ಎನ್ನುವುದು ಎಲ್ಲರ ಅನುಭವ ಜನ್ಯ ಮಾತು. ಇದೀಗ ಮತ್ತೆ ಈ ಕ್ಷೇತ್ರವನ್ನು ತನ್ನ ಬಗಲಿಗೆ ಹಾಕಿಕೊಂಡು ಮತ್ತೆ ಭಯೋತ್ಪಾದನೆಯನ್ನು ಮೂಡಿಸಲು ಕಾರ್ಯತಂತ್ರವನ್ನು ಆ ಪಕ್ಷ ಹೆಣೆದಂತಿದೆ.
ಅಭಿವೃದ್ಧಿಯಿಂದಲೇ ಅಧಿಕಾರ: ಜಾಗೃತ ಮತದಾರರು ಬಿಜೆಪಿಯ ಸಾಧನೆ, ಜನತೆಯ ಭೀತಿ ರಹಿತ ಬದುಕು ನೀಡಿದ ಬಿಜೆಪಿಯನ್ನು ಖಂಡಿತಾ ಬೆಂಬಲಿಸುತ್ತಾರೆ. ಗೌರವಯುತ ಮಾಸಾಶನ, ಸಾಲ ಮನ್ನಾದಂತಹ ಕಾರ್ಯಕ್ರಮಗಳಿಂದ ರಾಜ್ಯದ ಜನರ ಮನಗೆದ್ದಿರುವಾಗ ಅಭಿವೃದ್ಧಿಯೇ ನಮ್ಮ ಸಾಧನೆಯಾಗಿ, ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತಾಗುತ್ತದೆ ಎಂದರು.
ತನ್ನ ಅಲ್ಪ ಕಾಲಾವಧಿಯಲ್ಲಿ 22 ಖಾತೆಗಳನ್ನು ನಿರ್ವಹಿಸಿ ರಾಜ್ಯಕ್ಕೆ ಅತ್ಯತ್ತಮ್ಮ ಸೇವೆ ಸಲ್ಲಿಸುವ ಅವಕಾಶವನ್ನು ಪಕ್ಷ ಒದಗಿಸಿದೆ. ಈ ಬಾರಿ ಸ್ಥಳೀಯರೂ ಆಗಿರುವ ಮಠಂದೂರು ಸಂಜೀವ ಗೌಡ ಅವರನ್ನು ಗೆಲ್ಲಿಸಿ, ಕ್ಷೇತ್ರ ಇನ್ನೂ ಹೆಚ್ಚಿನ ಸಾಧನೆ ಮಾಡಲು ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.
ಕಾರ್ಯಕರ್ತರ ಪಕ್ಷ: ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿ ಬಿಜೆಪಿ ಜನ ಸಾಮಾನ್ಯರ ಪಕ್ಷ. ಇಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಮಂದಿಗೆ ಮಾನ್ಯತೆ ಇಲ್ಲ. ಸಾಮಾನ್ಯ ಕಾರ್ಯಕರ್ತನಾಗಿಯೂ ಪಕ್ಷದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಬಹುದೆಂಬ ಸತ್ಯವನ್ನು ಸಂಜೀವ ಗೌಡರ ಆಯ್ಕೆಯೇ ದೃಢ ಪಡಿಸುತ್ತದೆ. ಕ್ಷೇತ್ರದಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯ, ಕಾರ್ಯಕರ್ತರ ನಿರಂತರ ಶ್ರಮದಿಂದ ಮತ್ತೆ ಪಕ್ಷವನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಜೀವ ಮಠಂದೂರು, ನಾನು ಅಧಿಕಾರದ ಆಶೆಗಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಪಕ್ಷದ ಮುಂದಾಳುಗಳ ಸಮಾಜದ ಹಿರಿಯ ಸೂಚನೆಯಂತೆ ಹಾಗೂ ಕಾರ್ಯಕರ್ತರ ಆಶಯದಂತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರ ಬೇಕೆಂದು ತಿಳಿಸಿದರು. ಸಭೆಯಲ್ಲಿ ಪಕ್ಷದ ಮುಂದಾಳುಗಳಾದ ರಾಜೀವ ಭಂಡಾರಿ, ಬೂಡಿಯಾರ್ ರಾಧಾಕೃಷ್ಣ ರೈ, ಜಯಾನಂದ, ಗೋಪಾಲಕೃಷ್ಣ ಹೇರಳೆ, ಬಜತ್ತೂರು ಕೇಶವ ಗೌಡ, ಉಮೇಶ್ ಶೆಣೈ, ಅಪ್ಪಯ್ಯ ಮಣಿಯಾಣಿ, ಯೋಗೀಶ್ ಶೆಣೈ, ಭಾಸ್ಕರ ಆಚಾರ್ಯ, ಶ್ರೀಮತಿ ನಳಿನಾಕ್ಷಿ, ಯತೀಶ್ ಶೆಟ್ಟಿ, ಹರೀಶ್ ನಾಯಕ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.