ತಪ್ಪಿತಸ್ಥ ಉಗ್ರರಿಗೆ ಶಿಕ್ಷೆ: ಆಗ್ರಹ
ಮಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬುಧವಾರ ನಡೆದ ಬಾಂಬ್ಸ್ಫೋಟ ಕೃತ್ಯವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸಿದೆ.
ಪ್ರಮುಖ ರಸ್ತೆಯಲ್ಲೇ ಸ್ಫೋಟ ಸಂಭವಿಸಿದ್ದು, ಇದು ಆಂತಕಕ್ಕೆ ಕಾರಣವಾಗಿದ್ದು, ಉಗ್ರರು ಜನಸಾಮಾನ್ಯರು, ದೇವಸ್ಥಾನ ಸೇರಿದಂತೆ ರಾಜಕೀಯ ಪಕ್ಷಗಳ ಕಚೇರಿಯನ್ನು ಗುರಿಯಾಗಿಟ್ಟು ದಾಳಿ ನಡೆಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ಅಭಾವಿಪ ಒತ್ತಾಯಿಸಿದೆ.
ಮುಂಬೈ ದಾಳಿ, ಬೆಂಗಳೂರು, ಪುಣೆ, ದೆಹಲಿ ಕೋರ್ಟ್ ದಾಳಿಯಲ್ಲಿ ಭಾಗವಹಿಸಿದ ಉಗ್ರರಿಗೆ ಶಿಕ್ಷೆಯಾಗದಿರುವುದು ಈಗ ನಡೆಯುತ್ತಿರುವ ಘಟನೆಗಳಿಗೆ ಅಭಯ ನೀಡಿದಂತಾಗಿದೆ. ಈ ಹಿಂದಿನ ಉಗ್ರ ಚಟುವಟಿಕೆಗಳ ವಿಚಾರಣೆಯನ್ನು ತೀವ್ರಗೊಳಿಸಬೇಕು ಎಂದು ರಾಜ್ಯ ಕಾರ್ಯದರ್ಶಿ ರಮೇಶ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪಿಎಫ್ಐ ಖಂಡನೆ: ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ಸ್ಫೋಟವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ. ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದು, ಅಮಾಯಕರು ಸಂಕಷ್ಟಕ್ಕೆ ಸಿಲುಕಿದಾಗ ಜನಪ್ರತಿನಿಧಿಗಳು ಪ್ರಬುದ್ಧವಾಗಿ ವರ್ತಿಸಬೇಕು. ಸರ್ಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಚುನಾವಣೆ ವೇಳೆ ನಡೆದ ಈ ಸ್ಫೋಟ ಹಲವು ಸಂಶಯಕ್ಕೆ ಎಡೆಮಾಡಿದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
--