ಕೇರಳದಲ್ಲಿ ರಾಜ್ಯದ ವಾಹನ ಪರವಾನಗಿಗೆ ಅನುಮತಿ
ಮಂಗಳೂರು: ಮೋಟಾರು ವಾಹನ ಕಾಯ್ದೆ-1988ರ ಅನ್ವಯ ಯಾವುದೇ ರಾಜ್ಯಗಳು ನೀಡಿದ ಪರವಾನಗಿ, ಬ್ಯಾಚ್ ಕೇರಳದ ಎಲ್ಲಾ ಭಾಗಗಳಲ್ಲೂ ನ್ಯಾಯ ಸಮ್ಮತ ಎಂದು ಕೇರಳದ ಹೈಕೋರ್ಟಿನ ನ್ಯಾಯಮೂರ್ತಿ ವಿ. ಚಿತಂಬರೇಶ್ರ ತೀರ್ಪು ನೀಡಿದ್ದಾರೆ.
ಕಾಸರಗೋಡಿನಲ್ಲಿ ವಾಹನ ಚಲಾಯಿಸುವ ಕಾಂಪ್ಕೋ ಸಿಬ್ಬಂದಿಯು ಕರ್ನಾಟಕದ ಪರವಾನಗಿ ಹೊಂದಿದ್ದು, ವಾಹನ ಚಲಾಯಿಸಲು ಸಮ್ಮತವಲ್ಲ ಎಂಬ ಆಧಾರದಲ್ಲಿ ಕಾಸರಗೋಡಿನ ಸಿವಿಲ್ ಠಾಣೆಯ ಮೋಟಾರು ವಾಹನ ಇನ್ಸ್ಪೆಕ್ಟರ್ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಕಾಂಪ್ಕೋ ಕೇರಳ ಕೋರ್ಟಿನಲ್ಲಿ ದಾವೆ ಸಲ್ಲಿಸಿತ್ತು.
ಕೇರಳ ಸರ್ಕಾರವು ವಾಹನ ಚಾಲಕರು ಧರಿಸಬೇಕಾದ ಬ್ಯಾಜ್ ಮತ್ತು ಸಮವಸ್ತ್ರದ ಕುರಿತು ಕೂನೂನು ಮಾಡಲು ಅಧಿಕಾರವನ್ನು ಹೊಂದಿದ್ದರೂ ದೇಶದ ಇತರ ರಾಜ್ಯಗಳು ನೀಡುವ ಬ್ಯಾಜ್ಗಳು ಕೇರಳದಲ್ಲಿ ನ್ಯಾಯ ಬಾಹಿರವಲ್ಲ ಎಂಬ ತೀರ್ಪು ನೀಡಿದೆ. ಇದರಿಂದ ರಾಷ್ಟ್ರಮಟ್ಟದ ವಾಹನ ಪರವಾನಗಿ ಹೊಂದಿರುವ ಚಾಲಕರಿಗೆ ತೀರ್ಪು ನೆಮ್ಮದಿ ನೀಡಿದಂತಾಗಿದೆ.
--
ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಮಂಗಳೂರು: ಮೂಡುಬಿದಿರೆ ಇರುವೈಲು ಗ್ರಾಮದ ಪೂವಾಣಿಬೆಟ್ಟು ನಿವಾಸಿಯೊಬ್ಬರ ಮಗಳಿಗೆ 18 ವರ್ಷ ತುಂಬುವ ಮೊದಲೇ ಮದುವೆ ನಿಶ್ಚಯಿಸಿದ ಮಾಹಿತಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಾನೂನು ಬದ್ಧ ರೀತಿಯಲ್ಲಿ ಮದುವೆಯಾಗುವಂತೆ ಎಚ್ಚರಿಕೆ ನೀಡಿದ್ದಾರೆ.
ಬಾಲಕಿಯು ಪಿಯುಸಿ ಶಿಕ್ಷಣ ಮುಗಿಸಿದ್ದು, 18ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡಿದ್ದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯ ಉಲ್ಲಂಘನೆ ಮಾಡಿದಂತೆ ಎಂದು ಮನೆ ಭೇಟಿ ನೀಡಿದ್ದ ರಕ್ಷಣಾಧಿಕಾರಿ ಗ್ರೇಸಿ ಎಲ್. ಗೊನ್ಸಾಲ್ವಿಸ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲ ಎಂ. ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ವಿವಾಹವಾಗಲಿರುವ ಹುಡುಗನಿಗೂ ಬಾಲ್ಯ ವಿವಾಹವಾಗುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೂರವಾಣಿಯಲ್ಲಿ ಎಚ್ಚರಿಕೆ ನೀಡಿದರು.
18 ವರ್ಷ ತುಂಬಿದ ಮೇಲೆ ಮದುವೆ ಮಾಡಿಸುವುದಾಗಿ ಬಾಲಕಿಯ ಅಜ್ಜಿ, ಮಾವಂದಿರು ಲಿಖಿತ ಹೇಳಿಕೆ ನೀಡಿದ್ದಾರೆ.