ಚುನಾವಣೆ ಭದ್ರತೆ ಕೇಂದ್ರ ಮೀಸಲು ಪಡೆ ಆಗಮನ
ಸುಳ್ಯ: ಚುನಾವಣಾ ಬಂದೋಬಸ್ತ್‌ಗಾಗಿ ಕೇಂದ್ರ ಮೀಸಲು ಪಡೆ ಸುಳ್ಯಕ್ಕೆ ಆಗಮಿಸಿದೆ. ಸಿಕ್ಕಿಂನ ಇಂಡಿಯನ್ ರಿಸರ್ವ್ ಬೆಟಾಲಿಯನ್‌ಗೆ ಸೇರಿದ 100 ಸದಸ್ಯರ ಒಂದು ತುಕಡಿ ಮಂಗಳವಾರ ಸುಳ್ಯಕ್ಕೆ ಆಗಮಿಸಿತು. ಚುನಾವಣೆಗೆ ಮುಂಚಿತವಾಗಿ ಸುಳ್ಯ ವಿಧಾನಸಭಾ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಗಸ್ತು ತಿರುಗುವುದು, ಚುನಾವಣಾ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡುವುದು, ನಕ್ಸಲ್ ಪೀಡಿತ ಪ್ರದೇಶಗಳ ಪ್ರದೇಶಗಳ ಬಂದೋಬಸ್ತ್‌ಗೆ ಮೀಸಲು ಪಡೆಯನ್ನು ನೇಮಕ ಮಾಡಲಾಗುತ್ತದೆ. ಪ್ರತಿ ಬೂತ್‌ಗಳಲ್ಲಿ 4-5 ಸಿಬ್ಬಂದಿಯನ್ನು ರಕ್ಷಣೆಗಾಗಿ ನಿಯೋಜಿಸಲಾಗುತ್ತದೆ. ಮಲೆನಾಡು ಪ್ರದೇಶವಾದ ಸುಳ್ಯಕ್ಕೆ ಇದೇ ಪ್ರಥಮವಾಗಿ ಚುನಾವಣಾ ಕಾರ್ಯಕ್ಕೆ ಕೇಂದ್ರೀಯ ರಕ್ಷಣಾ ಪಡೆ ಆಗಮಿಸಿದೆ. ಡಿವೈಎಸ್‌ಪಿ ತುಳಸಿ ಛೇತ್ರಿ ನೇತೃತ್ವದ ತಂಡದಲ್ಲಿ ಮೂರು ಮಂದಿ ಇನ್ಸ್‌ಪೆಕ್ಟರ್‌ಗಳಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಕ್ಕಾಗಿ ಒಟ್ಟು ನಾಲ್ಕು ತುಕಡಿ ಕೇಂದ್ರೀಯ ಮೀಸಲು ಪಡೆಯನ್ನು ನಿಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ಮುನ್ನೂರು ಮಂದಿಯ ಮೂರು ತಂಡಗಳು ಆಗಮಿಸಲಿವೆ ಎಂದು ತಿಳಿದು ಬಂದಿದೆ.
--
ಕೋಮುವಾದಿ ಬಿಜೆಪಿಯ ಕಿತ್ತೊಗೆಯಿರಿ: ಮೊಯ್ಲಿ
ಉಪ್ಪಿನಂಗಡಿ: ಕೋಮು ಸೂಕ್ಷ್ಮ ಜಿಲ್ಲೆಯನ್ನಾಗಿ ದಕ್ಷಿಣ ಕನ್ನಡವನ್ನು ಪರಿವರ್ತಿಸಿದ ಬಿಜೆಪಿಯನ್ನು ಕಿತ್ತೊಗೆದು ಜಿಲ್ಲೆಯನ್ನು ಸಾಮರಸ್ಯದ ಜಿಲ್ಲೆಯನ್ನಾಗಿ ಪರಿವರ್ತಿಸೋಣ ಎಂದು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಗುರುವಾರ ಉಪ್ಪಿನಂಗಡಿಯ ಪೃಥ್ವೀ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಚುನಾವಣಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಅತಿ ವಿಶ್ವಾಸ ಸಲ್ಲದು: ಮಾತೃ ಸ್ವರೂಪಿ, ಸರ್ವರನ್ನೂ ಸಮಭಾವದಿಂದ ಕಾಣುವ ಶಕುಂತಲಾ ಶೆಟ್ಟಿಯನ್ನು ಈ ಬಾರಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರು ಗೆದ್ದೇ ಗೆಲ್ಲುತ್ತಾರೆ ಎನ್ನುವ ಅತೀವ ವಿಶ್ವಾಸದಿಂದ ಕರ್ತವ್ಯದ ಮೈ ಮರೆವು ಬೇಡ ಎಂದು ಮೊಯ್ಲಿ ಕಿವಿಮಾತು ಹೇಳಿದರು.
ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಮಾತನಾಡಿ, ಗೂಂಡಾಗಿರಿಯ ಮರು ಸ್ಥಾಪನೆಯ ಭೀತಿ ಮೂಡಿಸಿ ಬಿಜೆಪಿಯ ಡಿ. ವಿ. ಸದಾನಂದ ಗೌಡ ಜನತೆಯನ್ನು ಕಾಂಗ್ರೆಸ್‌ನಿಂದ ವಿಮುಖರನ್ನಾಗಿಸಲು ಯತ್ನಿಸುತ್ತಿದ್ದಾರೆ. ನನ್ನ ಶಾಸಕತ್ವದಡಿ ಈ ಹಿಂದೆಯೂ ಗೂಂಡಾಗಿರಿ ನಡೆಯಲು ಬಿಡಲಿಲ್ಲ. ಮುಂದೆ ಆಯ್ಕೆಯಾದರೂ ನಡೆಯಲು ಬಿಡೋದಿಲ್ಲ. ಪಕ್ಷದೊಳಗಿನ ಅಸಮಾಧಾನವನ್ನು ತಾಯಿಯ ಸ್ಥಾನದಲ್ಲಿ ನಿಂತು ಬಗೆಹರಿಸಲೆತ್ನಿಸುತ್ತೇನೆ ಎಂದರು.
ಮುಖಂಡರಾದ ಸಂಕಪ್ಪ ರೈ, ಸೋಮನಾಥ, ಪ್ರವೀಣ್‌ಚಂದ್ರ ಆಳ್ವ, ಎಂ.ಎಸ್.ಮಹಮ್ಮದ್, ನವೀನ್ ಭಂಡಾರಿ, ಜೋಹರಾ ನಿಸಾರ್ , ಶ್ರೀರಾಮ್ ಪಕಳ, ಸಾಹುಲ್ ಹಮೀದ್ ಕೆ.ಕೆ., ಅಶ್ರಫ್ ಬಸ್ತಿಕಾರ್, ಚಂದ್ರಹಾಸ ರೈ, ಮುಸ್ತಾಫ ಕೆಂಪಿ ಮೊದಲಾದವರು ಇದ್ದರು.
ನಿರಂಜನ್ ರೈ ಮಠಂತಬೆಟ್ಟು ನಿರೂಪಿಸಿದರು.