ವಾಹನ ಡಿಕ್ಕಿ: ಬೈಕ್ ಸವಾರ ದಂಪತಿ ಸಾವು
ಬಂಟ್ವಾಳ: ಬೈಕೊಂದಕ್ಕೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಉಪ್ಪಿನಂಗಡಿ- ಕಕ್ಕೆಪದವು ರಸ್ತೆಯ ಉಳಿ ಗ್ರಾಮದ ಅಂಕರೋಡಿ ಎಂಬಲ್ಲಿ ನಡೆದಿದೆ.
ಮಣಿನಾಲ್ಕೂರು ಗ್ರಾಮದ ಮುಂಡ್ರೆಲ್ ನಿವಾಸಿಗಳಾದ ಜನಾರ್ದನ ಪೂಜಾರಿ (50) ಹಾಗೂ ಪತ್ನಿ ಜಯಲಕ್ಷ್ಮೀ (45) ಮೃತರು.
ಇವರು ಪಾಂಡವರಕಲ್ಲಿನಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಮುಗಿಸಿ, ವಾಪಾಸ್ ಮನೆಗೆ ಬರುತ್ತಿದ್ದಾಗ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಧಾವಿಸಿ ಬಂದ ವಾಹನವೊಂದು ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಬಳಿಕ ಅದರ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಕೆಲ ಹೊತ್ತಿನ ಬಳಿಕ ಈ ದಾರಿಯಾಗಿ ತೆರಳುತ್ತಿದ್ದ ಅಟೋ ರಿಕ್ಷಾವೊಂದರ ಚಾಲಕ ಹಾಗೂ ಅದರಲ್ಲಿದ್ದ ಪ್ರಯಾಣಿಕರು ಗಮನಿಸಿದಾಗ ಸ್ಥಳದಲ್ಲಿಯೇ ಮೃತಪಟ್ಟಿದ್ದ ಜನಾರ್ದನ ಅವರ ಗುರುತು ಪತ್ತೆ ಹಚ್ಚಿ ದೂರವಾಣಿ ಮೂಲಕ ಅವರ ಮನೆಯನ್ನು ಸಂಪರ್ಕಿಸಲಾಯಿತು.
ಈ ಸಂದರ್ಭದಲ್ಲಿ ಅವರ ಪತ್ನಿ ಕೂಡ ಗಂಡನ ಜೊತೆ ತೆರಳಿರುವುದು ಅವರ ಮಗಳಿಂದ ತಿಳಿದು ಬಂತು. ತಕ್ಷಣ ಹುಡುಕಾಡಿದಾಗ ಜಯಲಕ್ಷ್ಮೀ ಅವರ ಮೃತದೇಹ ರಸ್ತೆ ಪಕ್ಕದ ಚರಂಡಿಯಲ್ಲಿ ಪತ್ತೆಯಾಯಿತು. ಡಿಕ್ಕಿಯ ರಭಸಕ್ಕೆ ಜಯಲಕ್ಷ್ಮೀ ಚರಂಡಿಗೆ ಎಸೆಯಲ್ಪಟ್ಟಿದ್ದಾರೆ. ಇದಕ್ಕೂ ಮೊದಲು ಈ ದಾರಿಯಾಗಿ ಪೀಠೋಪಕರಣಗಳನ್ನು ಹೇರಿಕೊಂಡು ಪಿಕಪ್ ವಾಹನವೊಂದು ಸಂಚರಿಸಿದ್ದು, ಅದೇ ವಾಹನ ಡಿಕ್ಕಿ ಹೊಡೆದಿರುವ ಅನುಮಾನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದ ಪುಂಜಾಲಕಟ್ಟೆ ಪೊಲೀಸರು ಎಲ್ಲೆಡೆ ನಾಕಾಬಂದಿ ಹಾಕಿದರೂ ವಾಹನ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.