ವೀರಪ್ಪ ಮೊಯ್ಲಿ ಇಂದು ಸುಳ್ಯಕ್ಕೆ
ಸುಳ್ಯ: ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ಶುಕ್ರವಾರ ಸಂಜೆ 4ಕ್ಕೆ ಸುಳ್ಯಕ್ಕೆ ಬರಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಜೆ 4 ಗಂಟೆಗೆ ವೀರಪ್ಪ ಮೊಯ್ಲಿಯವರು ಕಾಂಗ್ರೆಸ್ ಪರ ಪ್ರಚಾರ ನಡೆಸುವುದಕ್ಕಾಗಿ ಸುಳ್ಯಕ್ಕೆ ಬರಲಿದ್ದಾರೆ. ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಬಳಿಕ ತಾಲೂಕು ಕಚೇರಿ ಎದುರು ತಮಿಳು ಕಾರ್ಮಿಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು. ಕೆ.ಎಂ. ಮುಸ್ತಫಾ, ಪುರುಷೋತ್ತಮ ಬಂಗಾರಕೋಡಿ, ಎಸ್. ಸಂಶುದ್ದೀನ್, ಜೂಲಿಯಾ ಕ್ರಾಸ್ತಾ, ಪಿ.ಎಸ್. ಗಂಗಾಧರ್ ಮೊದಲಾದವರಿದ್ದರು.
ಇಂದು ಡಯಾಲಿಸಿಸ್ ಸೆಂಟರ್ ಆರಂಭ
ಮಂಗಳೂರು: ಫಳ್ನೀರ್ನ ಇಂದಿರಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಏ. 19 ರಿಂದ ಡಯಾಲಿಸಿಸ್ ಸೆಂಟರ್ ಕಾರ್ಯಾರಂಭಗೊಳ್ಳಲಿದೆ. ಈ ಸೆಂಟರ್ ಪ್ರಾರಂಭದ ದಿನದಲ್ಲಿ ಹಗಲು ಹೊತ್ತು ಕಾರ್ಯಾಚರಿಸಲಿದ್ದು, ನಂತರ ಅಗತ್ಯಕ್ಕೆ ತಕ್ಕಂತೆ 24 ಗಂಟೆ ಕಾರ್ಯ ನಿರ್ವಹಿಸಲಿದೆ. ರೋಗಿಗಳ ಕಿಡ್ನಿ ತೊಂದರೆಗಳಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಿದ್ದು, ಡಯಾಲಿಸಿಸ್ ಕೈಗೆಟಕುವ ದರದಲ್ಲಿ ಸಿಗಲಿದೆ ಎಂದು ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕ ಡಾ. ಸೈಯದ್ ನಿಜಾಮುದ್ದೀನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎರಡು ಡಯಾಲಿಸಿಸ್ ಯಂತ್ರಗಳಿದ್ದು, ಒಂದನ್ನು ಬಡರೋಗಿಗಳಿಗಾಗಿ ಬಳಸಲಾಗುವುದು. ಅರ್ಹರು ತಮ್ಮ ವೈದ್ಯರಿಂದ ಶಿಫಾರಸ್ಸು ಪತ್ರ ಪಡೆದು ಬಂದಲ್ಲಿ ರು. 550ಕ್ಕೆ ಚಿಕಿತ್ಸೆ ನೀಡಲಾಗುವುದು. ಇತರ ಔಷಧ ಮತ್ತು ಅಗತ್ಯ ವಸ್ತುಗಳಿಗೆ ಮೊತ್ತ ತೆರಬೇಕಾಗುತ್ತದೆ ಎಂದರು.
ಧ್ವನಿ ಮುದ್ರಿತ ಸಂದೇಶ ವಿರುದ್ಧ ಕ್ರಮ
ಮಂಗಳೂರು: ರಾಜಕೀಯ ಪಕ್ಷದ ಅಭ್ಯರ್ಥಿಗಳು ಎಸ್ಎಂಎಸ್ ಮೂಲಕ ಧ್ವನಿಮುದ್ರಿತ ಸಂದೇಶಗಳು ಮತದಾರರನ್ನು ತಲುಪುತ್ತಿರುವ ಮಾಹಿತಿ ಆಯೋಗದ ಗಮನಕ್ಕೆ ಬಂದಿದೆ. ಎಂಸಿಎಂಸಿ ಸಮಿತಿಯ ಅನುಮತಿ ಪಡೆಯದೆ ಕಳುಹಿಸುವ ಜಾಹಿರಾತು ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸರ್ವಿಸ್ ಪ್ರೊವೆಡರ್ಗಳ ವಿರುದ್ಧವೂ ಸೆ.127 ಆರ್ಪಿ ಆಕ್ಟ್ 1951ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸರ ವರ್ಗಾವಣೆ
ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಮತ್ತು ಮೂರು ವರ್ಷ ಮೇಲ್ಪಟ್ಟು ಜಿಲ್ಲೆಯಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಬಂದರು ಇನ್ಸ್ಪೆಕ್ಟರ್ ಮಂಜುನಾಥ ಶೆಟ್ಟಿ ಸಿಆರ್ಇ ವಿಭಾಗಕ್ಕೆ, ಕದ್ರಿ ಇನ್ಸ್ಪೆಕ್ಟರ್ ರಾಘವ ಪಡೀಲ್ ಉಡುಪಿ ಅಬಕಾರಿ ಲಾಟರಿ ನಿಷೇಧ ದಳಕ್ಕೆ, ಮೂಲ್ಕಿ ಇನ್ಸ್ಪೆಕ್ಟರ್ ಬಷೀರ್ ಅಹಮ್ಮದ್ ನಾಗರಿಕ ಹಕ್ಕು ಜಾರಿ ನಿದೇರ್ಶನಾಲಯಕ್ಕೆ. ಬಜಪೆ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ ಕರಾವಳಿ ಕಾವಲು ಪಡೆಗೆ. ಕಾರ್ಕಳ ಡಿವೈಎಸ್ಪಿ ಜಯಂತ್ ಶೆಟ್ಟಿ ದ.ಕ. ಜಿಲ್ಲಾ ಅಪರಾಧ ಅಭಿಲೇಖ ಸಂಗ್ರಹಾಲಯಕ್ಕೆ, ಡಿಸಿಆರ್ಬಿ ಡಿವೈಎಸ್ಪಿ ಸದಾನಂದ ವರ್ಣೇಕರ್ಗೆ ಬಂಟ್ವಾಳ ಉಪವಿಭಾಗಕ್ಕೆ, ಕರಾವಳಿ ಕಾವಲು ಪಡೆ ಡಿವೈಎಸ್ಪಿ ಮೆಂಡೋನ್ಸಾ ಪುತ್ತೂರು ಉಪವಿಭಾಗಕ್ಕೆ, ಯಲಹಂಕ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ಬಂದರು ಠಾಣೆಗೆ, ಮಂಗಳೂರು ಸಿಆರ್ಇ ಸೆಲ್ನ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ತಿಮ್ಮಪ್ಪ ನಾಯ್ಕ ಕದ್ರಿ ಠಾಣೆಗೆ, ಬಜಪೆಗೆ ಇನ್ಸ್ಪೆಕ್ಟರ್ ಪ್ರಸನ್ನ ಕುಮಾರ್ ವರ್ಗಯಿಸಿ ಆದೇಶ ಹೊರಡಿಸಲಾಗಿದೆ.