ಸುಳ್ಳು ಪ್ರಮಾಣ ಪತ್ರ: 'ಕೈ' ಅಭ್ಯರ್ಥಿ ವಿರುದ್ಧ ಕೋರ್ಟ್ಗೆ
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ಸಲ್ಲಿಸಿದ ನಾಮಪತ್ರದ ಪ್ರಮಾಣ ಪತ್ರ (ಅಫಿಡವಿಟ್)ದಲ್ಲಿ ಅವರ ವಿರುದ್ಧ ಇರುವ ಲೋಕಾಯುಕ್ತ ದೂರಿನ ಕುರಿತು ಉಲ್ಲೇಖಿಸಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಆರೋಪಿಸಿದರೆ, 'ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ' ಎಂದು ಲೋಬೋ ಸ್ಪಷ್ಟನೆ ನೀಡಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ 120ಎ ಯನ್ನು ಲೋಬೋ ಉಲ್ಲಂಘಿಸಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಭಟ್ ಮಾಡಿದ ಆರೋಪಕ್ಕೆ, ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದರೆ ಮಾತ್ರ ನಾಮಪತ್ರದ ಜತೆ ಪ್ರಮಾಣ ಪತ್ರದಲ್ಲಿ ವಿವರ ನೀಡಬೇಕೆಂದು ಲೋಬೋ ಪ್ರಕಟಣೆ ಮೂಲಕ ಸಮರ್ಥನೆ ನೀಡಿದ್ದಾರೆ.
ಚುನಾವಣಾಧಿಕಾರಿ ಮೇಲೆ ಆರೋಪ: ಲೋಕಾಯುಕ್ತ ದೂರಿನ ಕುರಿತು ಉಲ್ಲೇಖಿಸದೆ ಸತ್ಯ ಮರೆಮಾಚಿರುವುದಕ್ಕೆ ಕೋರ್ಟ್ ಶಿಕ್ಷಿಸಬಹುದು. ಆದ್ದರಿಂದ ನಾಮಪತ್ರ ತಿರಸ್ಕರಿಸುವಂತೆ ಲಿಖಿತವಾಗಿ ದಾಖಲೆ ಸಹಿತ ಚುನಾವಣಾ ಅಧಿಕಾರಿಯನ್ನು ಕೋರಲಾಗಿದೆ. ಇಂಥ ಪ್ರಕರಣ ಇತ್ಯರ್ಥಕ್ಕೆ ನ್ಯಾಯಾಲಯ ಮೊರೆ ಹೋಗುವಂತೆ ಚುನಾವಣಾಧಿಕಾರಿ ಶ್ರೀಕಾಂತ್ ರಾವ್ ತಿಳಿಸಿ, ಲೋಬೋ ನಾಮಪತ್ರ ಪುರಸ್ಕರಿಸಿದ್ದಾರೆ. ಆದ್ದರಿಂದ ವಾರದೊಳೆಗ ಮಂಗಳೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಭಟ್ ಹೇಳಿದ್ದರು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಒದಗಿಸಿಲ್ಲ. ಅಲ್ಲದೆ ಶಪಥ ಪತ್ರದಲ್ಲಿ ಸಲ್ಲಿಸಿರುವ ಸತ್ಯಾಸತ್ಯತೆ ನಿರ್ಣಯಿಸುವುದು ಚುನಾವಣಾಧಿಕಾರಿ ವ್ಯಾಪ್ತಿಗೆ ಬರುವುದಿಲ್ಲ. ಉಲ್ಲಂಘನೆ ಇದ್ದರೆ ಸೂಕ್ತ ವೇದಿಕೆಯಲ್ಲಿ ನಿರ್ಣಯಿಸಬೇಕು. ಆದ್ದರಿಂದ ನಾಮಪತ್ರವನ್ನು ಅಂಗೀಕರಿಸಿದ್ದೇನೆ ಎಂದು ದಕ್ಷಿಣ ವಿಧಾನಸಭೆ ಕ್ಷೇತ್ರ ಚುನಾವಣಾಧಿಕಾರಿ ಆದೇಶ ಹೊರಡಿಸಿದ ಪ್ರತಿಯನ್ನು ಲೋಬೋ ಬಿಡುಗಡೆ ಮಾಡಿದ್ದಾರೆ.