ಅನಿಲ ಆಧಾರಿತ ವಿದ್ಯುತ್ ಉತ್ಪಾದನೆಗೆ ಒತ್ತು
ಸುಳ್ಯ: ಕಾಂಗ್ರೆಸ್ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಿದೆ. ಮೂರು ಮೂಲಗಳಿಂದ ಅನಿಲ ಸರಬರಾಜು ಮೂಲಕ ವಿದ್ಯುತ್ ಕೊರತೆಗೆ ಪರಿಹಾರ ಹುಡುಕಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಿಲ ಆಧಾರಿತ ಮಾಲಿನ್ಯ ರಹಿತ ವಿದ್ಯುತ್ ಸ್ಥಾವರ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಶುಕ್ರವಾರ ಸುಳ್ಯಕ್ಕೆ ಆಗಮಿಸಿದ ಅವರು ಕಾಂಗ್ರೆಸ್ ಚುನಾವಣಾ ಪ್ರಚಾರ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಇದಕ್ಕೂ ಮೊದಲು ಅವರು ತಮಿಳು ಕಾರ್ಮಿಕರು ಸುಳ್ಯ ತಾಲೂಕು ಕಚೇರಿ ಎದುರು ಕಳೆದ ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ತಮಿಳು ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.
ಸರ್ವಾಧಿಕಾರಿ: ಕಲ್ಲಡ್ಕ ಪ್ರಭಾಕರ ಭಟ್ ಕರ್ನಾಟಕದ ಸರ್ವಾಧಿಕಾರಿ. ಅವರು ಯಾವುದೇ ಪ್ರಜಾಪ್ರತಿನಿಧಿ ಅಲ್ಲದಿದ್ದರೂ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂದು ನಿರ್ಧರಿಸುತ್ತಾರೆ. ಧಾರ್ಮಿಕ ಪರಿಷತ್ ಹೆಸರಿನಲ್ಲಿ ಹುಂಡಿ ಸಂಗ್ರಹ ಮಾಡುತ್ತಿದ್ದಾರೆ. ಧಾರ್ಮಿಕ ಭಾವನೆಗಳೊಂದಿಗೆ ಸ್ಪಂದಿಸಲು ಗೊತ್ತಿಲ್ಲದ ಇಂಥವರನ್ನು ಜನ ಅಧಿಕಾರದಿಂದ ದೂರವಿಡಬೇಕು ಎಂದು ಮೊಯಿಲಿ ಹೇಳಿದರು.
ಬಿಜೆಪಿ ಇಂದು ಮೂರು ಹೋಳಾಗಿದೆ. ಬಿಜೆಪಿ ಮತ್ತು ಕೆಜೆಪಿ ಮಧ್ಯೆ ಅಸ್ತಿತ್ವಕ್ಕಾಗಿ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ಭಸ್ಮಾಸುರ ತನ್ನ ತಲೆಗೇ ಕೈಯಿಟ್ಟು ಭಸ್ಮವಾಗಿ ಹೋದಂತೆ ಬಿಜೆಪಿ ಭಸ್ಮವಾಗಿ ಹೋಗಲಿದೆ ಎಂದ ಅವರು, ಬಿಜೆಪಿಯವರು ಅಧಿಕಾರ ಕೇಳುವುದು ತಮ್ಮ ನಾಯಕರ ವಿರುದ್ಧ ಇರುವ ಕೇಸುಗಳನ್ನು ಮುಚ್ಚಿಹಾಕಲು. ಆದರೆ ಕಾಂಗ್ರೆಸ್ ಅಧಿಕಾರ ಕೇಳುವುದು ನಿರ್ಮಲ ಆಡಳಿತ ನೀಡಲು ಎಂದು ಹೇಳಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಅವರನ್ನು ಬಹುಮತದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವಂತೆ ವೀರಪ್ಪ ಮೊಯ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಅಭ್ಯರ್ಥಿ ಡಾ. ರಘು, ಕಾಂಗ್ರೆಸ್ ನಾಯಕರಾದ ಕಣಚ್ಚೂರು ಮೋನು, ನಿತ್ಯಾನಂದ ಮುಂಡೋಡಿ, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಕೆ.ಎಸ್. ದೇವರಾಜ್, ಎಸ್. ಶಂಧು ದನ್, ಶಿವಕುಮಾರ್ ಕೌಡಿಚ್ಚಾರ್, ಪಿ.ಎಸ್. ಗಂಗಾಧರ್, ಎನ್. ಜಯಪ್ರಕಾಶ್ ರೈ, ರಾಜೀವಿ ಆರ್ ರೈ, ಕಳಂಜ ವಿಶ್ವನಾಥ ರೈ, ಟಿ.ಎಂ. ಶಹೀದ್, ಕೆ. ಗೋಕುಲ್ ದಾಸ್, ದಿವ್ಯಪ್ರಭಾ ಚಿಲ್ತಡ್ಕ, ವಿಮಲಾ ರಂಗಯ್ಯ, ಅಬ್ದುಲ್ ಗಫೂರ್ ಕಲ್ಮಡ್ಕ ಮೊದಲಾದವರಿದ್ದರು.