ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರು. 2 ಕ್ಕೆ ಅಕ್ಕಿ ವಿತರಣೆಗೆ ಕಾಂಗ್ರೆಸ್ ಅಡ್ಡಿ: ಬಿಜೆಪಿ ಆರೋಪ

Lingaraj Badiger
Updated On : 20 Apr 2013, 11:38 am

ಮಂಗಳೂರು: ರಾಜ್ಯದಲ್ಲಿ ರು. 2ರಂತೆ ಅಕ್ಕಿ ವಿತರಿಸುವ ಯೋಜನೆಗೆ ತಡೆಯೊಡ್ಡಿದ್ದು ಕಾಂಗ್ರೆಸ್. ಇದೀಗ ರು. 1 ರಂತೆ ಅಕ್ಕಿ ನೀಡುವುದಾಗಿ ಹೇಳುತ್ತಿರುವುದು ಕೇವಲ ಬೊಗಳೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮೋನಪ್ಪ ಭಂಡಾರಿ ಟೀಕಿಸಿದ್ದಾರೆ.
 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಜನಾರ್ದನ ಪೂಜಾರಿ ಅವರು ರು. 1 ರಂತೆ ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ  ವಿತರಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಇದು ಬಡಜನರನ್ನು ದಿಕ್ಕುತಪ್ಪಿಸುವ ಹೇಳಿಕೆ. ಈಗಾಗಲೇ ಬಿಜೆಪಿ ಸರ್ಕಾರ ಬಿಪಿಎಲ್ ಕಾರ್ಡ್ದಾರರಿಗೆ ರು. 2ರಂತೆ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ಮುಂದಾದಾಗ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆಂದು ಅದಕ್ಕೆ ತಡೆಯೊಡ್ಡುವ ಮೂಲಕ ಕಾಂಗ್ರೆಸ್ ಬಡಜನರ ವಿರೋಧಿಯಾಗಿದೆ ಎಂದರು.
 ಕಾಂಗ್ರೆಸ್ ಒಡೆದು ಹೋಳಾದ ಮನೆಯಾಗಿರುವುದರಿಂದ ಬಿಜೆಪಿ ಒಗ್ಗಟ್ಟಿನ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಜಿಲ್ಲೆಯಲ್ಲಿ ಅಭ್ಯರ್ಥಿಗಳ ಘೋಷಣೆ ಬಗ್ಗೆ ಕಾರ್ಯಕರ್ತರಿಂದ ಯಾವುದೇ ಅಪಸ್ವರ ಎದ್ದಿಲ್ಲ. ಆದರೆ ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಆದರೂ ಮೊಯ್ಲಿ, ಆಸ್ಕರ್, ಪೂಜಾರಿ ಒಗ್ಗಟ್ಟಿನ ಮಂತ್ರ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.
 ಬಂಟ್ವಾಳದಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಆರ್ಎಸ್ಎಸ್ ಮುಖಂಡ ಡಾ.ಪ್ರಭಾಕರ ಭಟ್ ವಿರುದ್ಧ ತನ್ನ ನೇರ ಸ್ಪರ್ಧೆ ಎನ್ನುತ್ತಿದ್ದಾರೆ. ಆರ್ಎಸ್ಎಸ್ ಬಿಜೆಪಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ರಾಜೇಶ್ ನಾಯ್ಕ ಬಲಿಷ್ಟ ಅಭ್ಯರ್ಥಿಯಾಗಿದ್ದು, ಅಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.
24ಕ್ಕೆ ಮೂಡುಬಿದಿರೆಗೆ ಸಿಎಂ: ಮಂಗಳೂರು, ಸುಳ್ಯ, ಪುತ್ತೂರು, ಮಂಗಳೂರು ನಗರ, ಬಂಟ್ವಾಳ, ಮೂಡುಬಿದಿರೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಜರುಗಿದೆ ಎಂದು ತಿಳಿಸಿದರು.
 20ರಂದು ಬೆಳ್ತಂಗಡಿಯಲ್ಲಿ ಕಾರ್ಯಕರ್ತರ ಸಮಾವೇಶ ಜರಗುತ್ತದೆ. 24ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೂಡುಬಿದಿರೆಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮುಖಂಡರಾದ ಶ್ರೀಕರ ಪ್ರಭು, ನಿತಿನ್ ಕುಮಾರ್, ಸುಧಾಕರ ಜೋಶಿ, ರಾಜಗೋಪಾಲ ರೈ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement