ಅಭಿವೃದ್ಧಿ ಶಬ್ಧಕ್ಕೆ ಬಿಜೆಪಿ ಸ್ಪಷ್ಟ ವ್ಯಾಖ್ಯಾನ: ಡೀವಿ
ಬೆಳ್ತಂಗಡಿ: ಅಭಿವೃದ್ಧಿ ಎಂಬ ಶಬ್ಧಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡಿ ಕಲ್ಪನೆಯ ದಿಕ್ಕು ತೋರಿಸಿದ್ದು ಬಿಜೆಪಿ. ವ್ಯಕ್ತಿ ಮತ್ತು ಸಿದ್ಧಾಂತದ ಪ್ರಶ್ನೆ ಬಂದಾಗ ಬಿಜೆಪಿ ವ್ಯಕ್ತಿಯನ್ನು ಎಂದೂ ಆರಿಸಿಲ್ಲ. ಬದಲಿಗೆ ಸಿದ್ಧಾಂತವನ್ನೇ ಆರಿಸಿಕೊಂಡ ಏಕೈಕ ಪಕ್ಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಶನಿವಾರ ಇಲ್ಲಿನ ಶ್ರೀ ಮಂಜುನಾಥೇಶ್ವರ ಕಲಾ ಭವನದಲ್ಲಿ ಬಿಜೆಪಿ ಅಭ್ಯರ್ಥಿ ರಂಜನ್ ಗೌಡ ಪರ ಮತಯಾಚಿಸಿ, ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ರಾಹುಲ್ ಗಾಂಧಿ ಯುವಕರಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಎಲ್ಲೂ ಯುವಕರಿಗೆ ಅವಕಾಶ ನೀಡಿಲ್ಲ. ವಯಸ್ಸಾದವರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿ ಯುವಕರಿಗೆ ಟಿಕೆಟ್ ನೀಡಿದೆ. ಈ ಮೂಲಕ ಯುವಜನರನ್ನು ಹುರಿದಂಬಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ವೀರಪ್ಪ ಮೊಯ್ಲಿ ಲಕೋಟೆ ಸಿಎಂ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ತಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದೆ ಎನ್ನಲು ನಾಚಿಕೆಯಾಗುತ್ತಿದೆ ಎನ್ನುತ್ತಿದ್ದಾರೆ. ಅವರು ಲಕೋಟೆ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಅವರೇ ನೆನಪಿಸಿಕೊಳ್ಳಲಿ. ಕರ್ನಾಟಕದ ಬಗ್ಗೆ ಮಾತನಾಡುವ ಅವರನ್ನು ಜನತೆ ರಾಜ್ಯದಿಂದ ಓಡಿಸಬೇಕಾಗಿದೆ. ಜಿಲ್ಲೆಗೆ ಬಂದು ನೇತ್ರಾವತಿ ನದಿ ತಿರುಗಿಸಲು ಅನುಮತಿ ಇಲ್ಲ ಎನ್ನುವ ಮೊಯ್ಲಿ ಚಿಕ್ಕಬಳ್ಳಾಪುರಕ್ಕೆ ಹೋಗಿ ನೇತ್ರಾವತಿ ನದಿ ತಿರುಗಿಸಿ ನೀರು ಕೊಡುತ್ತೇವೆ ಎನ್ನುತ್ತಾರೆ ಎಂದು ಡೀವಿ ಹೇಳಿದರು.
ಸಮಾವೇಶವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಕಾಂಗ್ರೆಸ್ನಲ್ಲಿ ಸಿಎಂ ಆಗಲು ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್ ಸರದಿಯಲ್ಲಿ ನಿಂತಿದ್ದಾರೆ. ಆದರೆ ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ.
ಟಿ ಡಿ.ವಿ. ಸದಾನಂದ ಗೌಡ.