ಐಪಿಎಲ್ ಬೆಟ್ಟಿಂಗ್: ಇಬ್ಬರು ವಶಕ್ಕೆ
ಉಪ್ಪಿನಂಗಡಿ: ಐಪಿಎಲ್ ಕ್ರಿಕೆಟ್ ಫಲಿತಾಂಶದ ಮೇಲೆ ಬೆಟ್ಟಿಂಗ್ ಮೂಲಕ ಹಣದ ವ್ಯವಹಾರ ನಡೆಸುತ್ತಿದ್ದ ಆರೋಪದ ಅನ್ವಯ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ರಮೇಶ್ ಹಾಗೂ ಚೇತು ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣ ಬಳಿಯ ಅಂಗಡಿಯೊಂದರಲ್ಲಿ ಈ ರೀತಿಯ ವ್ಯವಹಾರ ನಡೆಸಲಾಗುತ್ತಿದೆ ಎಂಬ ದೂರಿನ್ವಯ ಮೂವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ವಿಚಾರಣೆ ನಡೆಸಿದ ಬಳಿಕ ರಮೇಶ್ ಮತ್ತು ಚೇತು ಎಂಬಿಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮತ್ತೋರ್ವನನ್ನು ಪ್ರಕರಣಕ್ಕೆ ಸಂಬಂಧಿಸದ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಇಂಟರ್ನೆಟ್ ಮೂಲಕ ವ್ಯವಹರಿಸುತ್ತಿರುವ ಬೆಟ್ಟಿಂಗ್ ಜಾಲ ಇದೀಗ ಗ್ರಾಮೀಣ ಭಾಗವನ್ನೂ ಆವರಿಸಿದ್ದು, ಕೋಟ್ಯಂತರ ರು. ಹಣದ ವ್ಯವಹಾರ ನಡೆಯುತ್ತಿದೆ. ಈ ಅದೃಷ್ಟದಾಟಕ್ಕೆ ಸಿಲುಕಿ ಹಲವಾರು ಮಂದಿ ಹಣ ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ.