ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬದಲಾಗಿಲ್ಲ ಸಂಘ-ಬಿಜೆಪಿ ಸಂಬಂಧ

Rashmi Kasaragodu
Updated On : 21 Apr 2013, 2:10 am

 ಆತ್ಮಭೂಷಣ್
ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದದ್ದು ಸಂಘ ಪರಿವಾರ-ಬಿಜೆಪಿ ಸಂಬಂಧ ವಿವಾದ. ಇದಕ್ಕೆ ಕಾರಣ ಪುತ್ತೂರಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಗೆ ಟಿಕೆಟ್ ನಿರಾಕರಣೆ. ಬಿಜೆಪಿಗೆ ಬಿಜೆಪಿಯೇ ಉತ್ತರದಾಯಿತ್ವ ಹೊರತು ಸಂಘಪರಿವಾರ ಅಲ್ಲ ಎಂದು ಬಹಿರಂಗವಾಗಿ ಪ್ರಶ್ನಿಸಿ ವಿವಾದಕ್ಕೆ ನಾಂದಿ ಹಾಡಿದವರು ಹಿರಿಯ ಬಿಜೆಪಿ ಮುಖಂಡ, ಮಾಜಿ ಶಾಸಕ ಉರಿಮಜಲು ಕೆ.ರಾಮಭಟ್. ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಂಘ ಪರಿವಾರ ಹಸ್ತಕ್ಷೇಪ ಈ ಬಾರಿಯೂ ಬದಲಾಗಿಲ್ಲ.
 ಪುತ್ತೂರಿನಲ್ಲಿ ಸ್ವಾಭಿಮಾನಿ ವೇದಿಕೆ ಕಟ್ಟಿಕೊಂಡು ಸಂಘಪರಿವಾರ ಜತೆ ಎರಡೆರಡು ಬಾರಿ ಮಾತುಕತೆ ನಡೆಸಿ ಕೊನೆಗೂ ಇತ್ಯರ್ಥಕ್ಕೆ ಬರಲಾಗಲಿಲ್ಲ. ಅದರ ಪರಿಣಾಮ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಹಾಗೂ ಮಂಗಳೂರಲ್ಲಿ ಲೋಕಸಭೆಗೆ ರಾಮಭಟ್ ಪಕ್ಷೇತರ ಸ್ಪರ್ಧೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಗಡ್ಕರಿ ಎರಡನೇ ಬಾರಿ ಆಯ್ಕೆಗೆ ಬಿಜೆಪಿ ಸಂವಿಧಾನಕ್ಕೆ ತಿದ್ದುಪಡಿ ತಂದಿತು. ಇದಕ್ಕೆ ಸಂಘಪರಿವಾರ ಮೌನ ಸಮ್ಮತಿ ಸೂಚಿಸಿತು. ಇನ್ನು ಸ್ವಾಭಿಮಾನಿ ವೇದಿಕೆ ಅಥವಾ ಬಿಜೆಪಿ ಹಿರಿಯರ ವೇದಿಕೆಯಲ್ಲಿದ್ದರೂ ನ್ಯಾಯ ಸಿಗುವುದಿಲ್ಲ ಎಂದು ಹೊರನಡೆದರು ರಾಮಭಟ್.
ಈ ಬಾರಿಯೂ ಶಕ್ತಿ ಕೇಂದ್ರ ಆಯ್ಕೆ: ಈ ಬಾರಿಯ ವಿಧಾನಸಭಾ ಚುನಾವಣೆಗೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ಪೈಕಿ 3 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯಲ್ಲಿ ಸಂಘಪರಿವಾರ ಶಕ್ತಿ ಕೇಂದ್ರ ಹಸ್ತಕ್ಷೇಪ ಮಾಡಿದೆ ಎನ್ನುವುದನ್ನು ಬಿಜೆಪಿ ಮುಖಂಡರೇ ಹೇಳುತ್ತಾರೆ. ಮಂಗಳೂರು ಉತ್ತರ, ಬಂಟ್ವಾಳ ಹಾಗೂ ಬೆಳ್ತಂಗಡಿ ಕ್ಷೇತ್ರಗಳಲ್ಲಿ ಶಕ್ತಿ ಕೇಂದ್ರ ಸೂಚಿಸಿದ ಅಭ್ಯರ್ಥಿಗೆ ಮಣೆ ಹಾಕಲಾಗಿದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಬೆವರು ಸುರಿಸಿ ದುಡಿಯುವ ಬದಲು ಹಣದ ಕುಬೇರರನ್ನು ಕಣಕ್ಕಿಳಿಸುವಲ್ಲಿ ಸಂಘಪರಿವಾರ ಯಶಸ್ವಿಯಾಗಿದೆ ಎನ್ನುವುದು ಬಿಜೆಪಿ ಮುಖಂಡರ ಆರೋಪ. ಇದನ್ನು ನೇರವಾಗಿ ಹೇಳುವ ಧೈರ್ಯ ಯಾರೂ ತೋರಿಸುತ್ತಿಲ್ಲವಾದರೂ, ಒಳಗೊಳಗೇ ಅಸಮಾಧಾನ, ಅತೃಪ್ತಿ ಬಿಜೆಪಿಯಲ್ಲಿ ಇದೆ. ಬಂಟ್ವಾಳಕ್ಕೆ ಟಿಕೆಟ್ ಆಕಾಂಕ್ಷೆಯಾಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಕೂಡ ಬೇರೊಬ್ಬ ಅಭ್ಯರ್ಥಿಗೆ ಬಂಟ್ವಾಳದಲ್ಲಿ ಟಿಕೆಟ್ ನೀಡಿದ ಬಗ್ಗೆ ತಮ್ಮ ಆಪ್ತರಲ್ಲಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಾರಿಯ ವ್ಯತ್ಯಾಸ ಎಂದರೆ, ಶಕ್ತಿ ಕೇಂದ್ರದ ಆಯ್ಕೆ 8ರ ಬದಲು 3 ಕ್ಷೇತ್ರಕ್ಕೆ ಸೀಮಿತವಾದದ್ದು.
 ಮಂಗಳೂರು ದಕ್ಷಿಣ, ಮಂಗಳೂರು, ಮೂಡುಬಿದಿರೆ, ಪುತ್ತೂರು, ಸುಳ್ಯಗಳಲ್ಲಿ ಶಕ್ತಿ ಕೇಂದ್ರ ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ. ಇಲ್ಲಿ ಬಿಜೆಪಿ ಮಂಡಲ ಸಮಿತಿ ಶಿಫಾರಸ್ಸಿಗೆ ಮನ್ನಣೆ ನೀಡಲಾಗಿದೆ.
ಹುಬ್ಬಳ್ಳಿ ಮುಖಂಡರ ನೇತೃತ್ವ?: ಈ ಮಧ್ಯೆ ಸಂಘಪರಿವಾರದಲ್ಲಿ ಬಿಜೆಪಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಹುಬ್ಬಳ್ಳಿ ಮೂಲದ ಸಂಘಪರಿವಾರದ ಹಿರಿಯ ಮುಖಂಡರು ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಶಕ್ತಿ ಕೇಂದ್ರದ ಜವಾಬ್ದಾರಿಯನ್ನು ಹಿರಿಯ ಮುಖಂಡರು ನೋಡಿಕೊಳ್ಳುತ್ತಿದ್ದಾರೆ, ಸಂಘಪರಿವಾರದ ಮಂಗಳೂರಿನ ಮುಖಂಡರೊಬ್ಬರು ಇವರಿಗೆ ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement