ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಾಜಿ ಯೋಧನ ಕೊಲೆ ಆರೋಪಿಗೆ ಜೀವಾವಧಿ ಸಜೆ

Rashmi Kasaragodu
Updated On : 21 Apr 2013, 2:15 am

ಉಡುಪಿ: ಮಾಜಿ ಯೋಧರೊಬ್ಬರನ್ನು ಕೊಲೆ ಮಾಡಿದ ದೆಹಲಿ ಮೂಲದ ಆರೋಪಿಗೆ ಉಡುಪಿ ಜಿಲ್ಲಾ ತ್ವರಿತ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ವಾಸಿ ತನಿಯಪ್ಪ (56) ಎಂಬವರನ್ನು ನವದೆಹಲಿಯ ಧಛರ್ಮೇಂದ್ರ ಶರ್ಮ (39) ಕೊಲೆ ಮಾಡಿದ್ದರು. ಸೇನೆಯಲ್ಲಿದ್ದ ತನಿಯಪ್ಪ ನಿವೃತ್ತಿಯ ನಂತರ ತನ್ನ ದೆಹಲಿ ಮೂಲದ ಪತ್ನಿ ಸುಮನ ಹಾಗೂ ಮಕ್ಕಳೊಂದಿಗೆ ಬೊಮ್ಮರಬೆಟ್ಟು ಗ್ರಾಮದಲ್ಲಿ ವಾಸಿಸುತ್ತಿದ್ದರು. ಪತ್ನಿಯ ಸಂಬಂಧಿ ಧಮೇಂದ್ರ ಶರ್ಮ 2010ರಲ್ಲಿ ಬೊಮ್ಮರಬೆಟ್ಟಿಗೆ ಬಂದಿದ್ದು, ಸುಮನ ಅವರ ಜೊತೆ ಸಲುಗೆಯಿಂದ ಇದ್ದುದು ಕಂಡು ತನಿಯಪ್ಪ ಅವರು ಕರೆದು ಬುದ್ಧಿವಾದ ಹೇಳಿದ್ದರು. ಕೇಳದಿದ್ದಾಗ ಆತನನ್ನು ಮನೆಯಿಂದ ಹೊರ ಹಾಕಿದ್ದರು.
ನಂತರ ಶರ್ಮ ಮಣಿಪಾಲದ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಟೈಲರ್ ಆಗಿ ಕೆಲಸಕ್ಕೆ ಸೇರಿದ್ದು, ಆಗಾಗ ತನಿಯಪ್ಪ ಅವರ ಮನೆಗೆ ಬರುತ್ತಿದ್ದ ಮತ್ತು ಸುಮನ ಅವರೊಂದಿಗೆ ಫೋನ್ನಲ್ಲಿ ಸಂಪರ್ಕ ಇಟ್ಟುಕೊಂಡಿದ್ದ. ಇದನ್ನು ತಿಳಿದ ತನಿಯಪ್ಪ ಈ ಬಗ್ಗೆ ಕಠಿಣವಾಗಿ ಆಕ್ಷೇಪಿಸಿದ್ದರು. ಇದರಿಂದ ಸಿಟ್ಟಾದ ಶರ್ಮ ತನಿಯಪ್ಪನಿದ್ದರೆ ತನಗೆ ಸುಮನ ಅವರನ್ನು ಭೇಟಿಯಾಗಲು ಅಡ್ಡಿಯಾಗುತ್ತದೆ ಎಂದು 2010ರ ಸೆ. 16 ರಾತ್ರಿ 10.30 ಗಂಟೆಗೆ ಅವರ ಮನೆಯಲ್ಲಿಯೇ ಹರಿತವಾದ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ಈ ಸಂದರ್ಭ ಶರ್ಮ ಕೂಡ ಗಾಯಗೊಂಡಿದ್ದ. ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.
ತನಿಖೆಯ ಸಂದರ್ಭದಲ್ಲಿ ಪೊಲೀಸರು ಸಂಗ್ರಹಿಸಿದ ಆತನು ಕೊಲೆಗೆ ಬಳಸಿದ್ದ ಕತ್ತಿ, ಧರಿಸಿದ ಬಟ್ಟೆ ಇತ್ಯಾದಿ ಸಾಂದರ್ಭಿಕ ಸಾಕ್ಷಿ. ಆತನ ಮೊಬೈಲ್ನಲ್ಲಿ ಸುಮನ ಅವರೊಂದಿಗೆ ಮಾತುಕತೆ ನಡೆಸಿದ ವಿವರ ಇತ್ಯಾದಿಗಳ ಮೂಲಕ ಸರ್ಕಾರಿ ಅಭಿಯೋಜಕರಾದ ಟಿ.ಎಸ್. ಜಿತೂರಿ ವಾದಿಸಿದ್ದರು. ಅದರಂತೆ ಆರೋಪವು ಸಾಬೀತಾಗಿದ್ದು, ಉಡುಪಿಯ ಶೀಘ್ರ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್. ರೇವಣಕರ ಶನಿವಾರ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರು. 10 ಸಾವಿರ ದಂಡ ವಿಧಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement