ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಯಕ್ಷಗಾನ ಹಿರಿಯ ಕಲಾವಿದರ ಪರಿಸ್ಥಿತಿ ಸುಧಾರಿಸಿ: ಗಂಗಯ್ಯ ಶೆಟ್ಟಿ

Rashmi Kasaragodu
Updated On : 21 Apr 2013, 2:14 am

ಮಂಗಳೂರು: 'ಯಕ್ಷಗಾನ ಹಿರಿಯ ಕಲಾವಿದನ ಪರಿಸ್ಥಿತಿ ಸುಧಾರಿಸಿದರೆ ಯಕ್ಷಗಾನದ ಅಭಿವೃದ್ಧಿ ಸಾಧ್ಯ' ಎಂದು ಶ್ರೀ ಕಟೀಲು ಯಕ್ಷಗಾನ ಬಯಲಾಟ ಮೇಳದ ಬಣ್ಣದ ವೇಷಧಾರಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಹೇಳಿದ್ದಾರೆ.
ಶನಿವಾರ ವಿಶ್ವವಿದ್ಯಾಲಯ ಮಂಗಳಾ ಸಭಾಂಗಣದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ನೀಡಲಾಗುವ ಯಕ್ಷಮಂಗಳ ಪ್ರಶಸ್ತಿಯನ್ನು ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಅವರಿಂದ ಸ್ವೀಕರಿಸಿ ಮಾತನಾಡಿದರು.
  ಕಲೆಗಾಗಿ ದುಡಿದ ಕಲಾವಿದರ ಪಾಡು ಕೇಳುವವರಿಲ್ಲವಾಗಿದೆ. ತಾಯಿ ಮೃತದೇಹ ಸುಡುವ ಸಮಯದಲ್ಲಿಯೂ ಯಕ್ಷಗಾನದ ವೇಷ ಹಾಕುವ ಅನಿವಾರ್ಯವು ಇತ್ತು. ಕಲೆಗಾಗಿ ದುಡಿದು ಸಾಧನೆ ಮಾಡಿದ ಪರಿಣಾಮ ಸತ್ಪಲ ಸಿಕ್ಕಿದೆ. ಜನ ಗುರುತಿಸುತ್ತಾರೆ ಎಂಬುದೇ ಖುಷಿ ಎಂದರು.
ಕಲಾ ವಿಮರ್ಶಕ ಎ. ಈಶ್ವರಯ್ಯ ಮಾತನಾಡಿ, ಯಕ್ಷಗಾನ ಪ್ರಮಾಣ ಬದ್ಧ ಕಲೆ. ಕಲೆಗೆ ಹೊಸತನ ನೀಡುವ ಬಗೆಯನ್ನು ವಿಕಾಸದ ಮೂಲಕ ಬೆಳವಣಿಗೆ ಮಾಡಬೇಕೇ ಹೊರತು ಒಂದೇ ಸಲ ಹೇರಲ್ಪಟ್ಟರೆ ಅದನ್ನು ಪ್ರೇಕ್ಷಕ ಒಪ್ಪಿಕೊಳ್ಳುವುದಿಲ್ಲ ಎಂದರು.
ಗಂಗಯ್ಯ ಶೆಟ್ಟಿ ಮಹಿಷಾಸುರ ಪಾತ್ರಕ್ಕೆ ಜೀವ ತುಂಬಿದವರು. ಕಟೀಲು ಮೇಳದಲ್ಲಿ 40 ವರ್ಷ ಸೇವೆ ಸಲ್ಲಿಸಿದ ಕೀರ್ತಿ ಗಂಗಯ್ಯ ಅವರದ್ದು. ಸರ್ವಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಾಮರ್ಥ್ಯವುಳ್ಳವರು ಎಂದು ಯಕ್ಷಗಾನ ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆ ಅಭಿಪ್ರಾಯಪಟ್ಟರು.
 ಪ್ರಶಸ್ತಿಯು ರು. 25ಸಾವಿರ ನಗದು, ಸ್ಮರಣಿಕೆ, ಯಕ್ಷಗಾನದ ಬಣ್ಣದ ವೇಷದ ಮುಖವರ್ಣಿಕೆಯ ಪ್ರತಿಕೃತ ಒಳಗೊಂಡಿತ್ತು.  ಸಮಾರಂಭದಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಮೃತ ಸೋಮೇಶ್ವರ, ಕುಲಸಚಿವ ಡಾ.ಪಿ.ಎಸ್. ಯಡಪಡಿತ್ತಾಯ, ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ. ಚಿನ್ನಪ್ಪ ಗೌಡ ಇದ್ದರು.


ಮಕ್ಕಳ ತಂಡ ಸಿದ್ಧ
ವಿಶ್ವವಿದ್ಯಾಲಯ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ 30 ವಿದ್ಯಾರ್ಥಿಗಳ 'ಯಕ್ಷಮಂಗಳ ಮಕ್ಕಳ ತಂಡ' ಸಿದ್ಧವಾಗಿದೆ. ಇವರು ಮುಂದಿನ ತಿಂಗಳಿಂದ ಯಕ್ಷಗಾನ ಪ್ರದರ್ಶನ ನೀಡುವರು. ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿರುವ ಸಭಾಂಗಣದಲ್ಲಿ ಪ್ರತಿಧ್ವನಿ ಉಂಟಾಗುತ್ತಿದ್ದು, ಇದರ ನಿವಾರಣೆಗಾಗಿ ಕುಲಪತಿ ರು. 40 ಲಕ್ಷ ಬಿಡುಗಡೆಗೊಳಿಸಿದ್ದಾರೆ. ಮಳೆಗಾಲ ಮುಗಿಯುವ ಸಮಯಕ್ಕೆ ಸುಸಜ್ಜಿತ ಸಭಾಂಗಣ ಸಿದ್ಧಗೊಳ್ಳುತ್ತದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ. ಚಿನ್ನಪ್ಪ ಗೌಡ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement