ಹಾಲಾಡಿ ಬೆಂಬಲಿಗ ಕಾರಿಗೆ ಹಾನಿ
ಕೋಟ: ಕುಂದಾಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟರ ಬೆಂಬಲಿಗ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ಕಾರಿಗೆ ಯಾರೋ ದುಷ್ಕರ್ಮಿಗಳು ಹಾನಿಯನ್ನುಂಟು ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಜಿ. ಭರತ್ ಕುಮಾರ್ ಶೆಟ್ಟಿ ಅವರು ಶುಕ್ರವಾರ ರಾತ್ರಿ 8 ಗಂಟೆಗೆ ತಮ್ಮ ಕಾರನ್ನು ಹಾಲಾಡಿ ಜನಸೇವಾ ಕೇಂದ್ರದ ಬಳಿ ನಿಲ್ಲಿಸಿ ಹೊರಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ಬಂದು ನೋಡುವಾಗ ಯಾರೋ ಕಿಡಿಗೇಡಿಗಳು ಭಾರಿ ಗಾತ್ರದ ಕೆಂಪು ಕಲ್ಲೊಂದನ್ನು ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಹಾಕಿ ಕಾರಿಗೆ ಹಾನಿಯನ್ನುಂಟು ಮಾಡಿದ್ದರು. ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಈ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಶಾಸಕ, ಪಕ್ಷೇತರ ಅಭ್ಯರ್ಥಿ ಹಾಲಾಡಿ ಅವರ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಈ ಘಟನೆ ಸಂಭವಿಸಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಭರತ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ: ಕಾರು ವಶ
ಕುಂದಾಪುರ: ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲು ಅನುಮತಿ ಪಡೆದುಕೊಂಡಿದ್ದ ವಾಹನವನ್ನು ಕುಂದಾಪುರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಚುನಾವಣಾ ಗಸ್ತು ತಂಡ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಕೆಎ 20 ಪಿ 8049 ನಂಬರಿನ ಕಾರನ್ನು ಬೈಂದೂರು ವಿಧಾನ ಸಭಾ ಚುನಾವಣೆಗೆ ಅನುಮತಿ ಪಡೆದುಕೊಳ್ಳಲಾಗಿದೆ. ಆದರೆ, ಈ ಕಾರು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕುಂದಾಪುರ ನಗರದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಕೆಯಾಗುತ್ತಿರುವುದು ಪತ್ತೆಯಾಗಿದ್ದು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ವಿವರಣೆ ಕೋರಿ ನೋಟಿಸ್ ನೀಡಲಾಗಿದೆ ಮತ್ತು ಈ ವಾಹನವನ್ನು ವಶಕ್ಕೆ ತೆಗೆದುಕೊಂಡು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉದ್ಯಮಿಯಿಂದ ರು. 5 ಲಕ್ಷ ನಗದು ವಶ
ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ಪಂಜ ಐವತ್ತೋಕ್ಲು ಗ್ರಾಮದ ಉದ್ಯಮಿಯೊಬ್ಬರು ಪಂಜ ಬ್ಯಾಂಕೊಂದರಿಂದ ಶನಿವಾರ ರು. 5 ಲಕ್ಷ ಹಣ ಡ್ರಾ ಮಾಡಿದ ಮಾಹಿತಿ ಮೇರೆಗೆ ಸುಳ್ಯ ವಿಭಾಗೀಯ ಚುನಾವಣಾ ಮ್ಯಾಜಿಸ್ಟ್ರೇಟ್ ದಾಳಿ ನಡೆಸಿ ಹಣ ವಶಪಡಿಸಿಕೊಂಡಿದ್ದಾರೆ. ಜೆಸಿಬಿ ಮಾರಾಟ ಮಾಡಿದ ಹಣ ಇದಾಗಿದ್ದು, ಸ್ವಂತ ಕಾರ್ಯಕ್ಕೆ ಬಳಸಲು ಡ್ರಾ ಮಾಡಿರುವುದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.