ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಹಿತ್ತಲಲ್ಲೇ ಸೇಬು ಬೆಳೆಯಿರಿ'

Rashmi Kasaragodu
Updated On : 21 Apr 2013, 2:14 am

ಮಂಗಳೂರು: ಒಂದು ಸೇಬು ತಿಂದರೆ ಸಾಕು ವೈದ್ಯರ ಅಗತ್ಯವಿಲ್ಲ ಎಂಬ ಮಾತಿದೆ. ಆದರೆ ಸೇಬು ಬೆಲೆ ಗಗನಕ್ಕೆರಿರುವ ಸಂದರ್ಭದಲ್ಲಿ ಅದನ್ನು ಪ್ರತಿ ದಿನ ತಿನ್ನುವುದು ಕನಸಿನ ಮಾತು. ಆದರೆ ಮನೆ ಹಿತ್ತಲಲ್ಲೇ ಸೇಬು ಗಿಡ ಇದ್ದರೆ ಎಷ್ಟು ಚೆಂದ. ಜಿಲ್ಲೆಯಲ್ಲಿಯೂ ಸೇಬು ಬೆಳೆಯಲು ಅವಕಾಶವಿದೆ. ಆಶ್ಚರ್ಯವಾದರೂ ಇದು ಸತ್ಯ.
ದಕ್ಷಿಣ ಕನ್ನಡದ ಉಪ್ಪಿನಂಗಡಿ ಹಿರೆಂಬಾಡಿ ಕಾಟುಕುಕ್ಕೆ ಕೃಷ್ಣ ಶೆಟ್ಟಿ 3 ವರ್ಷದ ಹಿಂದೆ ಬೆಳೆದಿರುವ ಸೇಬು ಗಿಡವು ಫಸಲು ಬರಲು ತಯಾರಾಗಿದೆ. ಇದರಿಂದ ಬರಿ ಶೀತವಲಯದಲ್ಲಿ ಮಾತ್ರವಲ್ಲ ಸರಿಯಾದ ಆರೈಕೆಯಿಂದ ಉಷ್ಣವಲಯದಲ್ಲಿಯೂ ಸೇಬು ಬೆಳೆಯಬಹುದು ಎಂಬುದಕ್ಕೆ ನಿದರ್ಶನವಿದು.
ನಗರದ ಶಾರದಾ ವಿದ್ಯಾಲಯದಲ್ಲಿ ಶನಿವಾರ ಕರ್ನಾಟಕದಲ್ಲಿ ಸೇಬು ಬೆಳೆಯುವ ಸಾಧ್ಯತೆ ಬಗ್ಗೆ ಹಿಮಾಚಲ ಪ್ರದೇಶದ ಹಣ್ಣಿನ ವಿಜ್ಞಾನಿ ಚಿರಂಜಿತ್ ಪಾರ್ಮಾರ್ ಮಾಹಿತಿ ನೀಡಿದರು.
ಕರ್ನಾಟಕದ ವಾತಾವರಣವು ಸೇಬು ಬೆಳೆಯಲು ಸೂಕ್ತವಾಗಿದ್ದು, ಇಲ್ಲಿ ಸೇಬು ಕೃಷಿ ಮಾಡುವ ಸಾಧ್ಯತೆ ಇದೆ ಎಂದರು. ಇದಕ್ಕೆ ಪೂರಕವಾಗಿ ತುಮಕೂರಿನಲ್ಲಿ ರೈತರೊಬ್ಬರು ತಮ್ಮ ತೋಟದಲ್ಲಿ ಸೇಬು ಗಿಡ ಬೆಳೆದಿದ್ದು, ಕಾಯಿಗಳು ಹಣ್ಣಾಗುವ ಹಂತದಲ್ಲಿದೆ ಎಂದರು.
ಸೇಬು ಗಿಡದಲ್ಲಿ 2 ವಿಧದ ತಳಿಗಳಿವೆ. ಸೇಬು ಬೆಳೆಯಲು 12 ಡಿಗ್ರಿಗಿಂತ ಕಡಿಮೆ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಸಾಕಾಗುತ್ತದೆ. ತೆಂಗಿನತೋಟ, ಬಾಳೆ ತೋಟಗಳ ಮಧ್ಯದಲ್ಲಿ ಹಾಗೂ ಪ್ರತ್ಯೇಕವಾಗಿ ಬಿಸಿಲಿರುವ ಪ್ರದೇಶದಲ್ಲಿ ಗಿಡ ನೆಡಬಹುದಾಗಿದೆ. ಶೃಂಗೇರಿಯಲ್ಲಿ 2011ರಲ್ಲಿ ಗಿಡ ನೆಡಲಾಗಿದ್ದು, ಈಗ ಹೂವು ಬಿಡುವ ಹಂತದಲ್ಲಿದೆ ಎಂದು ಅವರು ವಿವರಿಸಿದರು.
ಪ್ರಾಯೋಗಿಕ ಪರಿಶೀಲನೆ: ಬೆಳೆಗಾರ ಕಾಟುಕುಕ್ಕೆ ಕೃಷ್ಣ ಶೆಟ್ಟಿ ಮಾತನಾಡಿ, ತಾನು ಕಳೆದ ಬಾರಿ ಒಂದು ಗಿಡಕ್ಕೆ ರು. 80 ರಂತೆ 20 ಗಿಡ ನೆಟ್ಟಿದ್ದು, ಇದರಲ್ಲಿ ಕೇವಲ 2 ಗಿಡ ಸತ್ತಿದೆ. ಬಾಳೆಗಿಡದ ಬಳಿಯಲ್ಲಿ ಗಿಡ ನೆಟ್ಟಿದ್ದು, 4-5 ಅಡಿ ಎತ್ತರ ಬೆಳೆದಿದೆ ಎಂದರು.
ಪ್ರಾಯೋಗಿಕವಾಗಿ ಇವುಗಳ ಬೆಳವಣಿಗೆ ಪರಿಶೀಲಿಸಲು ಗಿಡ ಬೆಳೆಸಿದ್ದು, ಆಸಕ್ತಿಯುಳ್ಳವರು ಇವುಗಳನ್ನು ಬೆಳೆಯಬಹುದು ಎಂದು ಹೇಳಿದರು. ಕೆಲವು ಆಸಕ್ತ ರೈತರು ಗಿಡಗಳನ್ನು ಖರೀದಿಸುತ್ತಿದ್ದು, ರಾಜ್ಯದಲ್ಲಿ 2013ರಲ್ಲಿ ಸುಮಾರು 1,200 ಸೇಬು ಗಿಡಗಳು ತರಿಸಲಾಗಿದೆ ಎಂದರು.
'50 ವರ್ಷದ ಹಿಂದೆ ಬೆಂಗಳೂರಿನಲ್ಲಿ ಸೇಬು ಬೆಳೆ ಬೆಳೆಯಲಾಗುತ್ತಿತ್ತು. ರೈತರಿಗೆ ಇದನ್ನು ಬೆಳೆಯಾಗಿ ಬೆಳೆಯಬಹುದು ಎಂಬ ಮಾಹಿತಿ ನೀಡಲಾಗುತ್ತಿದೆ ಹೊರತು ಬೆಳೆ ಬೆಳೆಯಲು ಒತ್ತಾಯಿಸುತ್ತಿಲ್ಲ' ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳಿದರು.
ಸಂವಾದದಲ್ಲಿ ಶಾರದಾ ವಿದ್ಯಾಲಯದ ಮುಖ್ಯಸ್ಥ ಎಂ.ಬಿ. ಪುರಾಣಿಕ್, ಅಡಿಕೆ ಪತ್ರಿಕೆ ಸಂಚಾಲಕ ಮಂಚಿ ಶ್ರೀನಿವಾಸ್, ಡಾ. ಭಾಸ್ಕರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement