ಅಸ್ಪೃಶ್ಯತೆ, ಜಾತೀಯತೆಗೆ ಬ್ರಾಹ್ಮಣರು ಕಾರಣರಲ್ಲ
ಕ.ಪ್ರ.ವಾರ್ತೆ , ಮಂಗಳೂರು , ಏ. 21
ಅಸ್ಪೃಶ್ಯತೆ, ಜಾತೀಯತೆ ಬ್ರಾಹ್ಮಣರ ಕೊಡುಗೆ ಅಲ್ಲ, ಅದಕ್ಕಿಂತ ಮೊದಲೇ ದಕ್ಷಿಣ ಭಾರತದಲ್ಲಿ ಇತ್ತು. ಆದರೂ ಬ್ರಾಹ್ಮಣರೆಡೆಗೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ಬ್ರಾಹ್ಮಣರ ಒಕ್ಕೂಟ ಆಶ್ರಯದಲ್ಲಿ ನಡೆದ ಬ್ರಾಹ್ಮಣ ಜಾಗೃತಿ ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬ್ರಾಹ್ಮಣರು ಇತರೆ ಜಾತಿ ಸಂಘಟನೆಯಂತೆ ಅಲ್ಲ. ಅವರಿಗೆ ಸಮಗ್ರ ಮಾನವ ಸಮಾಜ, ಹಿಂದೂ ಸಮಾಜದ ಹಿತರಕ್ಷಣೆಯ ಹೊಣೆ ಇದೆ. ಬ್ರಾಹ್ಮಣರಿಂದ ದಲಿತರವರೆಗೆ ಮಾರ್ಗದರ್ಶನ ಮಾಡುವುದು ಬ್ರಾಹ್ಮಣ. ಅವರಿಗೆ ಸಂದೇಶ ನೀಡುವುದು, ಅನ್ಯಾಯವಾದಾಗ ಪ್ರತಿಭಟಿಸುವುದನ್ನು ಬ್ರಾಹ್ಮಣರು ಮಾಡುತ್ತಾರೆ. ಬ್ರಾಹ್ಮಣರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಸಮಗ್ರ ಚಿಂತನೆ ಅಗತ್ಯವಿದೆ. ಬ್ರಾಹ್ಮಣರು ಗಾಯತ್ರಿ ಮಾತೆಯ ಪುತ್ರರಾಗಿದ್ದು, ವೇದಮಾತೆ ಎಲ್ಲರ ತಾಯಿ. ಭಿನ್ನ ಸಂಪ್ರದಾಯದ ಬ್ರಾಹ್ಮಣರ ಐಕ್ಯಕ್ಕೆ ಈ ಸಮ್ಮೇಳನ ನಾಂದಿಯಾಗಲಿ ಎಂದರು.
'ಬಿಸಿನೆಸ್ ಮೋಟಿವ್': ಬ್ರಾಹ್ಮಣ ಪರಂಪರೆಗೆ ಮಸಿ ಬಳಿಯುವ, ಮೂಲ ನಂಬಿಕೆಯ ಮೇಲೆ ದಾಳಿ ನಡೆಸುವ 'ಬಿಸಿನೆಸ್ ಮೋಟಿವ್' ಭಾರತೀಯ ಧಾರ್ಮಿಕ ಬುನಾದಿಯನ್ನೇ ಅಲ್ಲಾಡಿಸುವ ಹಂತಕ್ಕೆ ಬಂದಿದೆ ಎಂದು ಬ್ರಾಹ್ಮಣ ಜಾಗೃತಿ ಸಮ್ಮೇಳನಾಧ್ಯಕ್ಷ, ಅಂಕಣಕಾರ ಡಾ.ಪಿ.ಸದಾನಂದ ಮಯ್ಯ ದುಗುಡ ವ್ಯಕ್ತಪಡಿಸಿದರು.
ಸಂಘಟಿತವಾಗಿ ಬಾಳ್ವೆ ಇಂದಿಗೂ ದೂರವಾಗಿಲ್ಲ. ಆದರೆ ದೈವ, ಮಠ ಮಾನ್ಯಗಳ ವಿಚಾರದಲ್ಲಿ ಕಾರ್ಪೊರೇಟ್ ಸಂಸ್ಕೃತಿ ಪರಾಕಾಷ್ಠೆಗೆ ತಲುಪಿದೆ. ಇದರ ಅವಾಂತರದ ಅರಿವಿದ್ದೂ ಸಾಮಾಜಿಕ ಸ್ಥಿತ್ಯಂತರದ ವಿಚಾರದಲ್ಲಿ ಎಡವುತ್ತಿದ್ದೇವೆ. ಇದನ್ನು ನೋಡಿಯೂ ವಿಪ್ರ ಸಮಾಜ ಸುಮ್ಮನಿರುವುದು ಶೋಭೆ ತರುವ ಸಂಗತಿಯಲ್ಲ ಎಂದರು.
ರಾಮಕೃಷ್ಣ ಮಠದ ಶ್ರೀಜಿತಕಾಮಾನಂದಜೀ, ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುನಂದಾ ಮಯ್ಯ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಮತ್ತಿತರರು ಹಾಜರಿದ್ದರು.
ಸಮಾರಂಭಕ್ಕೆ ಮೊದಲು ಸಮ್ಮೇಳನಾಧ್ಯಕ್ಷ ಡಾ.ಸದಾನಂದ ಮಯ್ಯರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಸಮ್ಮೇಳನದಲ್ಲಿ ಮಯ್ಯಾಸ್ ಉತ್ಪನ್ನಗಳಲ್ಲದೆ, ವಿವಿಧ ವೈದಿಕ, ಸಾಂಸ್ಕೃತಿಕ ಹೊತ್ತಗೆಗಳ ಪ್ರದರ್ಶನ, ಮಾರಾಟ ಇತ್ತು.