ಕುಡಿಯುವ ನೀರಿಗೂ ಅಡ್ಡಿಯಾದ ನೀತಿ ಸಂಹಿತೆ
- ಮೌನೇಶ ವಿಶ್ವಕರ್ಮ
ಬಂಟ್ವಾಳ: ಬೇಸಗೆಯ ಕಾವು ಏರುತ್ತಿರುವಂತೆಯೇ ಚುನಾವಣಾ ಕಾವು ಏರುತ್ತಿದೆ.
ಇವೆಲ್ಲದರ ಪರಿಣಾಮ ಗ್ರಾಮ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಚುನಾವಣಾ ನೀತಿಸಂಹಿತೆ ಕುಡಿಯುವ ನೀರಿನ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದ ವಿದ್ಯಮಾನಗಳು ತಾಲೂಕಿನ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಏನಾಗಿದೆ...?: ಗ್ರಾಮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಚುನಾವಣಾ ನೀತಿ ಸಂಹಿತೆ ನೀರು ಸಮಸ್ಯೆಯನ್ನು ಬಗೆಹರಿಸುವ ಅಧಿಕಾರಿಗಳ ಕಾರ್ಯಕ್ಕೆ, ಮುತುವರ್ಜಿ ವಹಿಸುವ ಪಂಚಾಯಿತಿ ಜನಪ್ರತಿನಿಧಿಗಳ ಆಸಕ್ತಿಗೂ ಬ್ರೇಕ್ ಹಾಕಿದೆ.
ಒಟ್ಟಿನಲ್ಲಿ ನೀರಿನ ಸಮಸ್ಯೆಯ ತುರ್ತು ಶಮನಕ್ಕೆ ಚುನಾವಣಾ ನೀತಿ ಸಂಹಿತೆ ತೊಡಕಾಗಿ ಪರಿಣಮಿಸಿರುವುದಂತೂ ಸತ್ಯ. ನರಿಂಗಾನ ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕಾದ ಅನಿವಾರ್ಯತೆ ಕಳೆದೊಂದು ವಾರದ ಹಿಂದೆಯೇ ಬಂದಿತ್ತು.
ಈಗಾಗಲೇ ಎರಡು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಒದಗಿಸುತ್ತಿರುವ ಕೆಲ ಗ್ರಾಪಂಗಳು ನೀತಿ ಸಂಹಿತೆಯ ಕಾರಣವನ್ನು ಮುಂದಿಟ್ಟುಕೊಂಡು ಗ್ರಾಮದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.
ನೀತಿ ಸಂಹಿತೆಯಿಂದಾಗಿ ನಮಗೂ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಪ್ರತಿಕ್ರಿಯೆ ಪಂಚಾಯಿತಿ ಅಧಿಕಾರಿಗಳದ್ದು. ನಮಗೆ ಬಂದ ಮನವಿಯನ್ನು ಎಂಜಿನಿಯರ್ಗಳ ಮೂಲಕ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಕಳಹಿಸಿಕೊಟ್ಟಿದ್ದೇವೆ, ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮಗಳಲ್ಲಿಯೇ ಬಗೆಹರಿಸುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ.
ಸಮಸ್ಯೆ ಹೇಳಿದರೆ ನೀತಿ ಸಂಹಿತೆ ಉತ್ತರ: ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾದ ಸಮಯದಲ್ಲಿ ಗ್ರಾಮಸ್ಥರು ಪಂಚಾಯತ್ಗೆ ಮನವಿ ಮಾಡುತ್ತಾರೆ, ಮನವಿ ಸ್ವೀಕರಿಸುವ ಪಿಡಿಒಗಳು ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಕಾರಣ ಕೊಡುತ್ತಾರೆ.
ಸಮಸ್ಯೆ ಮತ್ತಷ್ಟು ಜಟಿಲವಾದಾಗ ಗ್ರಾಮಸ್ಥರ ಪ್ರತಿಭಟನೆ ಆರಂಭವಾಗುತ್ತದೆ, ಒತ್ತಡಕ್ಕೆ ಮಣಿದು ಕೊಳವೆ ಬಾವಿ ತೆಗೆಯುವ ಅನಿವಾರ್ಯತೆ ಎದುರಾಗುತ್ತದೆ. ಆಗ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಅಲ್ಲಿಂದ ಅನುಮತಿ ದೊರೆಯಲು ಕೆಲ ದಿನಗಳು ಕಾಯಬೇಕಾಗುತ್ತದೆ.
ತುರ್ತು ಕುಡಿಯುವ ನೀರಿನ ವ್ಯವಸ್ಥೆಗೆ ನೀತಿಸಂಹಿತೆ ಅಡ್ಡಿಯಾಗದು..: ಕುಡಿಯುವ ನೀರಿನ ಬರ ಕಂಡು ಬಂದ ಪ್ರದೇಶಗಳಲ್ಲಿ ತುರ್ತು ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಬಂಟ್ವಾಳ ಕ್ಷೇತ್ರ ಚುನಾವಣಾಧಿಕಾರಿ ಶಶಿಧರ್ ತಿಳಿಸಿದ್ದಾರೆ.
ಆಯೋಗ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದ್ದು, ತುರ್ತು ವ್ಯವಸ್ಥೆ ಕಲ್ಪಿಸಿ ನೀರು ಒದಗಿಸಲು ಪಂಚಾಯತ್ಗೆ ಅಧಿಕಾರವಿದೆ. ಆದರೆ ಹೊಸ ಕೊಳವೆಬಾವಿ ರಚನೆ, ಪಂಪ್ ಅಳವಡಿಕೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ(ಜಿಲ್ಲಾಧಿಕಾರಿ) ಯವರಿಂದ ಅನುಮತಿ ಪಡೆಯಬೇಕಾಗಿದೆ ಎಂದವರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. (ಮುಗಿಯಿತು)
ನೀತಿಸಂಹಿತೆ ಎಫೆಕ್ಟ್...
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಹಲವು ಕಾಮಗಾರಿಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದಿನಂಪ್ರತಿ ದೂರುಗಳು ಹೋಗುತ್ತಿವೆ. ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನದ ಓಟಕ್ಕೂ ನೀತಿಸಂಹಿತೆ ತಡೆಯೊಡ್ಡಿದೆ. ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಆಯೋಗ ಸುತ್ತೋಲೆಯಲ್ಲಿ ಹೇಳಿರುವುದರಿಂದ ನೀತಿ ಸಂಹಿತೆ ಉದ್ಯೋಗ ಖಾತ್ರಿ ಯೋಜನೆಯ ಮೇಲೂ ಪರಿಣಾಮ ಬೀರಿದೆ. ಶಾಸಕ ಬಿ. ರಮಾನಾಥ ರೈ ಅವರ ಅನುದಾನದಲ್ಲಿ ನಡೆಯುತ್ತಿರುವ ಹಲವು ಕಾಮಗಾರಿಗಳ ಬಗ್ಗೆ ಆಯೋಗಕ್ಕೆ ದೂರವಾಣಿ ದೂರು ಹೋಗಿದ್ದು, ಚುನಾವಣೆ ಘೋಷಣೆಯಾಗುವ ಮೊದಲೇ ಕಾಮಗಾರಿ ಆರಂಭವಾಗಿರುವುದರಿಂದ ಎಲ್ಲವೂ ತೊಡಕಿಲ್ಲದೆ ಸಾಗುತ್ತಿದೆ. ಬಡಗ ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ರಸ್ತೆಯೊಂದರ ಕಾಂಕ್ರಿಟೀಕರಣ ಕಾಮಗಾರಿಗೆ ತಾತ್ಕಾಲಿಕ ತಡೆಯಾಗಿದೆ. ದೂರುಗಳೆನ್ನೆಲ್ಲಾ ದಾಖಲಿಸಿಕೊಳ್ಳುತ್ತಿರುವ ಆಯೋಗ, ಮತಗಟ್ಟೆ ಅಧಿಕಾರಿಗಳು ಹಾಗೂ ಪಿಡಿಒಗಳ ಮೂಲಕ ದೂರುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.